ಬಶೀರ್ ಮೇಲೆ ಮಾರಕ ದಾಳಿ ಪ್ರಕರಣ: ನಾಲ್ವರ ಬಂಧನ
ದೀಪಕ್ ಹತ್ಯೆಗೆ ಪ್ರತೀಕಾರ

ಮಂಗಳೂರು, ಜ.6: ಅಬ್ದುಲ್ ಬಶೀರ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ.
ನಗರದ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕಾಸರಗೋಡು ಉಪ್ಪಳದ ಶ್ರೀಜಿತ್ ಪಿ.ಕೆ. ಯಾನೆ ಶ್ರೀಜು (25), ಮಂಜೇಶ್ವರ ಕುಂಜತ್ತೂರಿನ ಸಂದೇಶ್ ಕೋಟ್ಯಾನ್ (22), ಪಡೀಲ್ ಅಳಪೆ ಕಂಡೇವು ಮನೆ ನಿವಾಸಿಗಳಾದ ಕಿಶನ್ ಪೂಜಾರಿ (21), ಧನುಷ್ ಪೂಜಾರಿ (22) ಎಂಬ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಲ್ಲಿ ಕಿಶನ್ ಹಾಗೂ ಧನುಷ್ ಸಹೋದರರಾಗಿದ್ದಾರೆ. ಈ ಸಹೋದರರು ಶರತ್ ಹತ್ಯೆ ಪ್ರಕರಣದ ಬಳಿಕ ಅಡ್ಯಾರ್‌ನಲ್ಲಿ ನಡೆದ ಚೂರಿ ಇರಿತ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ ಎಂದರು.
ಆರೋಪಿ ಶ್ರೀಜಿತ್ ಪಿ.ಕೆ. ವಿರುದ್ಧ ಕಾಸರಗೋಡು ವ್ಯಾಪ್ತಿಯಲ್ಲಿ 6 ಪ್ರಕರಣಗಳು ಹಾಗೂ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಪ್ರಕರಣ ದಾಖಲಾಗಿವೆ. ಕಿಶನ್ ಪೂಜಾರಿ ವಿರುದ್ಧ ಮೂರು ಪ್ರಕರಣಗಳು, ಧನುಷ್ ಪೂಜಾರಿ ವಿರುದ್ಧ ಹಲ್ಲೆ ಮತ್ತು ದೊಂಬಿ ಪ್ರಕರಣ ಹಾಗೂ ಸಂದೇಶ್ ಎಂಬಾತನ ವಿರುದ್ಧ ಕಾಸರಗೋಡು ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿವೆ ಎಂದು ಕಮಿಷನರ್ ಮಾಹಿತಿ ನೀಡಿದರು.
ಹಿಂದುತ್ವ ಪರ ಸಂಘಟನೆಗೆ ಸೇರಿದವರು
ಬಂಧಿತ ಇಬ್ಬರು ಆರೋಪಿಗಳು ಸ್ಥಳೀಯ ಹಿಂದುತ್ವ ಪರ ಸಂಘಟನೆಗೆ ಸೇರಿದವರೆಂದು ಹೇಳಲಾಗಿದೆ. ಆದರೆ, ಯಾವ ಸಂಘಟನೆಗೆ ಸೇರಿದ್ದಾರೆಂಬುದು ವಿಚಾರಣೆಯಿಂದ ತಿಳಿದುಬರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಸಿಪಿ ಮಟ್ಟದ ಅಧಿಕಾರಿಯಿಂದ ತನಿಖೆ
ಬಂಧಿತ ಆರೋಪಿಗಳ ವಿಚಾರಣೆಗೆ ಎಸಿಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸಲಾಗುವುದು. ಇದಕ್ಕಾಗಿ ತನಿಖಾಧಿಕಾರಿಯಾಗಿ ಎಸಿಪಿ ವೆಲೆಂಟೈನ್ ಡಿಸೋಜ ಅವರನ್ನು ನೇಮಕ ಮಾಡಲಾಗಿದೆ. ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು ಎಂದವರು ಮಾಹಿತಿ ನೀಡಿದರು.
ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಶಾಂತರಾಮ್, ಪಿಎಸ್‌ಐ ಶ್ಯಾಮ್ ಸುಂದರ್, ಎಎಸ್‌ಐ ಹರೀಶ್ ಹಾಗೂ ಸಿಬ್ಬಂದಿಯವರಾದ ರಾಮ ಪೂಜಾರಿ, ಗಣೇಶ್, ಚಂದ್ರಶೇಖರ್, ಶೀನಪ್ಪ, ಚಂದ್ರ, ಸುಬ್ರಹ್ಮಣ್ಯ ಚಂದ್ರಹಾಸ, ಯೋಗೀಶ್, ರಾಜೇಂದ್ರ ಪ್ರಸಾದ್, ಅಬ್ದುಲ್ ಜಬ್ಬಾರ್, ಮಣಿ, ಪ್ರಶಾಂತ್ ಶೆಟ್ಟಿ, ಅಶಿತ್ ಡಿಸೋಜ, ತೇಜ ಕುಮಾರ್, ರಿತೇಶ್ ಪಾಲ್ಗೊಂಡ್ದಿರು.
ಕೊಲೆ ಯತ್ನ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಈ ತಂಡಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಪೊಲೀಸ್ ಆಯುಕ್ತರು, ಸೂಕ್ತ ಬಹುಮಾನ ನೀಡಿ ಪುರಸ್ಕರಿಸುವುದಾಗಿ ತಿಳಿಸಿದರು.
ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ರಿಝ್ವಾನ್ ಮತ್ತು ಪಿಂಕಿ ನವಾಝ್ ಪ್ರಮುಖ ಆರೋಪಿಗಳಾಗಿದ್ದಾರೆ. ಇವರ ನಿರ್ದೇಶನದಂತೆ ದೀಪಕ್‌ರನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇವರನ್ನು ಶೀಘ್ರದಲ್ಲೇ ವಿಚಾರಣೆಗೊಳಪಡಿಸಿ ನಿಖರ ಮಾಹಿತಿಯನ್ನು ಪಡೆಯಲಾಗುವುದು ಎಂದವರು ಹೇಳಿದರು.
ದೀಪಕ್ ಹತ್ಯೆಗೆ ಪ್ರತೀಕಾರ !
ಆರೋಪಿಗಳು ಅಬ್ದುಲ್ ಬಶೀರ್ ಅವರನ್ನೇ ಟಾರ್ಗೆಟ್ ಮಾಡಿಕೊಂಡು ಬಂದಿರಲಿಲ್ಲ. ಜ. 3ರಂದು ಕಂಕನಾಡಿಯ ಗರೋಡಿಯಲ್ಲಿ ನಡೆಯುತ್ತಿದ್ದ ಉತ್ಸವಕ್ಕೆ ಈ ನಾಲ್ವರು ಆರೋಪಗಳು ಬಂದಿದ್ದರು. ಕಾಸರಗೋಡು ಜಿಲ್ಲೆಯವರಾದ ಶ್ರೀಜಿತ್ ಪಿ.ಕೆ. ಮತ್ತು ಸಂದೇಶ್ ಕೋಟ್ಯಾನ್ ಅವರು ದೀಪಕ್ ರಾವ್ ಹತ್ಯೆಯಾಗಿರುವ ಮಾಹಿತಿಯನ್ನು ತಿಳಿದುಕೊಂಡಿದ್ದಾರೆ. ಕೂಡಲೇ ಅವರು ಇದಕ್ಕೆ ಪ್ರತೀಕಾರವಾಗಿ ಯಾರನ್ನಾದರೂ ಹತ್ಯೆ ಮಾಡಬೇಕೆಂಬ ಉದ್ದೇಶವನ್ನಿಟ್ಟು ಸ್ಥಳೀಯ ಸಹೋದರರಾಗಿರುವ ಕಿಶನ್ ಪೂಜಾರಿ ಮತ್ತು ಧನುಷ್ ಪೂಜಾರಿ ಅವರನ್ನು ಮಾರಕಾಸ್ತ್ರಗಳನ್ನು ತರುವಂತೆ ಸೂಚಿಸಿದ್ದಾರೆ.
ಅದರಂತೆ ಈ ಸಹೋದರು ಮಾರಕಾಸ್ತ್ರಗಳನ್ನು ತಂದಾಗ ಆರೋಪಿಗಳು ಯಾರನ್ನಾದರೂ ಕೊಲ್ಲುವ ಉದ್ದೇಶವನ್ನಿಟ್ಟು ಹೊರಟಿದ್ದಾರೆ. ಕೊಟ್ಟಾರ ಚೌಕಿ ಬಳಿ ತಲುಪುತ್ತಿದ್ದಂತೆ ಈ ಸಹೋದರರು ಅಬ್ದುಲ್ ಬಶೀರ್‌ರನ್ನು ತೋರಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ವಿವರಿಸಿದರು.
ಅಂಗಡಿ ಮುಚ್ಚಲು ಸಿದ್ಧತೆ ನಡೆಸುತ್ತಿದ್ದರು
ಜ.3ರಂದು ರಾತ್ರಿ ಸುಮಾರು 10 ಗಂಟೆಯ ಹೊತ್ತಿಗೆ ಕೊಟ್ಟಾರ ಚೌಕಿಯಲ್ಲಿ ಫಾಸ್ಟ್ ಫುಡ್ ಅಂಗಡಿಯನ್ನು ನಡೆಸುತ್ತಿದ್ದ ಅಬ್ದುಲ್ ಬಶೀರ್ ಅವರು ಅಂಗಡಿಯನ್ನು ಮುಚ್ಚಿ ಹೊರಡಲು ಸಿದ್ಧತೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಆರೋಪಿಗಳು ಅವರ ಮೇಲೆರಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು.
ಬಶೀರ್ ಚೇತರಿಕೆ
ಮಾರಣಾಂತಿಕ ಹಲ್ಲೆಗೊಳಗಾಗಿರುವ ಬಶೀರ್‌ರ ಸ್ಥಿತಿ ಪ್ರಾರಂಭದಲ್ಲಿ ಚಿಂತಾಜನಕವಾಗಿತ್ತು. ಆದರೆ, ಎರಡು ದಿನಗಳಿಂದ ಸ್ವಲ್ಪ ಮಟ್ಟಿಗೆ ಚೇತರಿಗೆ ಕಂಡಿದ್ದಾರೆ ಎಂದವರು ಹೇಳಿದರು.







