ಸಂಶೋಧನೆಯನ್ನು ವೈರಸ್‌ನಂತೆ ಹಚ್ಚಿಕೊಳ್ಳಿ: ವಿದ್ಯಾರ್ಥಿಗಳಿಗೆ ಸಿ.ಎನ್.ಆರ್.ರಾವ್ ಕರೆ

ಬೆಂಗಳೂರು, ಜ.6: ಇಂದಿನ ವಿದ್ಯಾರ್ಥಿಗಳು ಸಂಶೋಧನೆಯನ್ನು ವೈರಸ್‌ನಂತೆ ಹಚ್ಚಿಕೊಳ್ಳಬೇಕು. ಇದರಿಂದಾಗಿ ಯಾರಿಗೂ ಯಾವುದೇ ಅಪಾಯವಿಲ್ಲ ಎಂದು ಹಿರಿಯ ವಿಜ್ಞಾನಿ ಸಿ.ಎನ್.ಆರ್.ರಾವ್ ವಿದ್ಯಾರ್ಥಿಗಳಿಗೆ ಕರೆ ಕೊಟ್ಟಿದ್ದಾರೆ.
ಶನಿವಾರ ನಗರದ ಹೊಸಕೆರೆಹಳ್ಳಿಯ ಬಳಿಯ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ವಿಶ್ವ ಮಾನವ ಸಂಸ್ಥೆಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವಮಾನವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಂಶೋಧನೆಯನ್ನು ನಾನು ವೈರಸ್‌ನಂತೆ ಅಂಟಿಸಿಕೊಂಡಿದ್ದೇನೆ. ಇದರಿಂದ ನನಗೆ ಯಾವುದೇ ಅಪಾಯವಾಗಿಲ್ಲ. ಹೀಗಾಗಿ, ಎಲ್ಲರೂ ಇದನ್ನು ಮೈಗೂಡಿಸಿಕೊಳ್ಳಬೇಕು. ಅದರಿಂದ ವೈಜ್ಞಾನಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಸರಕಾರಗಳು ಯಾವುದೇ ಕಾರ್ಯಕ್ರಮಗಳನ್ನು ರೂಪಿಸಲಿ ಅಥವಾ ಬಿಡಲಿ ಮಕ್ಕಳ ಭವಿಷ್ಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದ ಅವರು, ಇಂದಿನ ಯುವ ಪೀಳಿಗೆ ತಂತ್ರಜ್ಞಾನದ ದಾಸರಾಗಬಾರದು. ನಾನು ಕಂಪ್ಯೂಟರ್, ಮೊಬೈಲ್ ಹೆಚ್ಚು ಬಳಸುವುದಿಲ್ಲ. ಯಾವುದೇ ವಿಷಯವಾಗಲಿ ಅದನ್ನು ಸಾಧಿಸುವ ಛಲ, ಪರಿಶ್ರಮ, ಶ್ರದ್ಧೆ ವಿದ್ಯಾರ್ಥಿಗಳಲ್ಲಿರಬೇಕು ಎಂದು ಸಲಹೆ ನೀಡಿದರು.
ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾದ ಚೈನಾ ದೇಶ ವೈಜ್ಞಾನಿಕ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಅತ್ಯುತ್ತಮ ಸಾಧನೆ ಮಾಡುತ್ತಿದೆ. ಯಾವುದೇ ವಿಚಾರ ಸಂಕಿರಣಗಳಲ್ಲಿ ಬೇರೆ ದೇಶಗಳಿಗಿಂತ ಚೈನಾದ ಪ್ರತಿನಿಧಿಗಳೇ ಹೆಚ್ಚು ಪಾಲ್ಗೊಳ್ಳುತ್ತಾರೆ ಎಂದು ರಾವ್ ತಿಳಿಸಿದರು.
ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಆರ್.ದೊರೆಸ್ವಾಮಿ ಮಾತನಾಡಿ, ಸಾಹಿತ್ಯದಲ್ಲಿ ರಾಷ್ಟ್ರಕವಿ ಕುವೆಂಪು ಹಾಗೂ ವಿಜ್ಞಾನದಲ್ಲಿ ಸಿ.ಎನ್.ಆರ್.ರಾವ್ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹುಟ್ಟಿದಾಗ ಮಾನವ ವಿಶ್ವಮಾನವನಾಗಿರುತ್ತಾನೆ. ಆದರೆ, ಬೆಳೆಯುತ್ತಾ ಅಲ್ಪ ಮಾನವನಾಗುತ್ತಿದ್ದಾನೆ. ಜಾತಿ, ಧರ್ಮ, ಭಾಷೆ, ಜನರಲ್ಲಿ ವೈಷಮ್ಯ ಮೂಡಿಸಿದ್ದು, ಮಾನವನನ್ನೇ ವಿಭಜಿಸುವಂತಹ ಕೆಲಸಗಳಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ವಿಶ್ವಕ್ಕೆ ಕ್ರಾಂತಿಯ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರಿಗೆ ಮರಣೋತ್ತರ ಭಾರತರತ್ನ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಕೆ.ವಿ.ಆರ್.ಠ್ಯಾಗೋರ್, ರಾವ್ ಅವರ ಪತ್ನಿ ಇಂದುಮತಿ ರಾವ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎನ್.ಬಿ.ದಿನೇಶ್, ಅಧ್ಯಕ್ಷ ಎಚ್.ಎಸ್.ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







