ಕಾಶ್ಮೀರದ ಗಡಿ ನಿವಾಸಿಗಳಿಗೆ ಸರಕಾರದಿಂದ ಬಂಕರ್ ವ್ಯವಸ್ಥೆ
ಪಾಕ್ ಸೇನೆಯ ದಾಳಿಯನ್ನು ಎದುರಿಸಲು ಕ್ರಮ

ಜಮ್ಮು, ಜ.6: ಗಡಿಯಲ್ಲಿ ಪಾಕಿಸ್ತಾನಿ ಸೇನೆಯಿಂದ ವರ್ಷದುದ್ದಕ್ಕೂ ನಡೆಯುವ ಶೆಲ್ ಮತ್ತು ಗುಂಡಿನ ದಾಳಿಯನ್ನು ಎದುರಿಸುವ ಗಡಿಪ್ರದೇಶದ 54,000 ನಿವಾಸಿಗಳಿಗೆ ಜೀವಿಸಲು ಸುರಕ್ಷಿತ ತಾಣಗಳನ್ನು ಒದಗಿಸುವ ಸಲುವಾಗಿ ಸರಕಾರವು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ 5,300 ಪ್ರತ್ಯೇಕ ಮತ್ತು ಸಮುದಾಯ ಬಂಕರ್‌ಗಳನ್ನು ನಿರ್ಮಿಸಲು ಮುಂದಾಗಿದೆ.
ನೂರು ಬಂಕರ್‌ಗಳನ್ನು ನಿರ್ಮಾಣ ಮಾಡಿರುವುದರ ಜೊತೆಗೆ ಸರಕಾರವು 4,918 ಪ್ರತ್ಯೇಕ ಮತ್ತು 372 ಸಾಮುದಾಯ ಬಂಕರ್‌ಗಳನ್ನು ನಿರ್ಮಾಣ ಮಾಡಲು ಅನುಮತಿ ನೀಡಿರುವುದಾಗಿ ರಜೌರಿ ಜಿಲ್ಲಾಭಿವೃದ್ಧಿ ಆಯುಕ್ತರಾದ ಶಹೀದ್ ಇಕ್ಬಾಲ್ ಚೌದರಿ ತಿಳಿಸಿದ್ದಾರೆ. 800 ಚ.ಅಡಿಯ ಸಮುದಾಯ ಬಂಕರ್‌ಗಳಲ್ಲಿ 40 ಜನರು ನಿಲ್ಲಬಹುದಾದರೆ 60 ಚ.ಅಡಿಯ ಪ್ರತ್ಯೇಕ ಬಂಕರ್‌ನಲ್ಲಿ ಎಂಟು ಮಂದಿ ನಿಲ್ಲಬಹುದು ಎಂದು ಅವರು ತಿಳಿಸಿದ್ದಾರೆ. ಈ ಯೋಜನೆಯು 54,000 ಜನರಿಗೆ ಜೀವಿಸಲು ಸುರಕ್ಷಿತ ತಾಣವನ್ನು ಒದಗಿಸಲಿದೆ ಎಂದು ಇಕ್ಬಾಲ್‌ತಿಳಿಸಿದ್ದಾರೆ.
ಶುಕ್ರವಾರದಂದು ಜಿಲ್ಲಾಭಿವೃದ್ಧಿ ಆಯುಕ್ತರು ಗಡಿ ನಿವಾಸಿಗಳು ಮತ್ತು ಅಧಿಕಾರಿಗಳ ಜೊತೆ ಪರಿಹಾರ ಮತ್ತು ಸೌಲಭ್ಯಗಳ ಬಗ್ಗೆ ಪರಿಶೀಲನಾ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಗಡಿ ನಿಯಂತ್ರಣ ರೇಖೆಗೆ ತಾಗಿಕೊಂಡಿರುವ ನೌಶೇರಾ, ದೂಂಗಿ ಮತ್ತು ಮಂಜಕೋಟ್ ಪ್ರದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ನಿಗದಿತ ಸಮಯದಲ್ಲಿ ನಿರ್ಮಿಸಬಹುದಾದ ಬಂಕರ್‌ಗಳ ಮಾದರಿಯ ಬಗ್ಗೆ ಸ್ಥಳೀಯರು, ಇಂಜಿನಿಯರ್‌ಗಳು, ಸೇನಾಧಿಕಾರಿಗಳು ಮತ್ತು ಆಡಳಿತ ಮುಖ್ಯಸ್ಥರ ಜೊತೆ ಸವಿವರ ಚರ್ಚೆ ನಡೆಸಲಾಯಿತು. ಕದನ ವಿರಾಮ ಉಲ್ಲಂಘನೆಯಿಂದಾಗಿ ಪದೇಪದೇ ವಲಸೆ ಹೋಗುವುದು ಅನಿವಾರ್ಯವಾಗಿರುವ ಗಡಿಪ್ರದೇಶದ ಜನರಿಗೆ ಪರಿಹಾರ ಒಗಿಸಿದರೆ ಬಹಳ ನೆರವಾದೀತು ಎಂದು ಆಯುಕ್ತರಸೀ ವೇಳೆ ತಿಳಿಸಿದ್ದಾರೆ.
ಸದ್ಯ ಸಂತ್ರಸ್ತರ ಶಿಬಿರಗಳಲ್ಲಿ ವಾಸಿಸುವ ಗಡಿ ವಲಸಿಗರಿಗೆ ಕ್ರಮವಾಗಿ ವಯಸ್ಕರಿಗೆ ತಿಂಗಳಿಗೆ ರೂ. 1,800 ಮತ್ತು ಮಕ್ಕಳಿಗೆ ಮಾಸಿಕ ರೂ. 1,325 ಪರಿಹಾರ ನೀಡಲಾಗುತ್ತಿದೆ. ಇದಲ್ಲದೆ, ಬೆಳೆಹಾನಿಗೆ ಸಂಬಂಧಿಸಿದಂತೆ ಪ್ರತೀ ಹೆಕ್ಟೇರ್‌ಗೆ ರೂ. 37,500 ಮತ್ತು ಪಶುಗಳು ಸಾವನ್ನಪ್ಪಿದ ಸಂದರ್ಭದಲ್ಲಿ ದೊಡ್ಡ ಜಾನುವಾರಿಗಳಿಗೆ ರೂ. 30,000 ಮತ್ತು ಸಣ್ಣ ಪಶುಗಳಿಗೆ ರೂ. 3,000 ಪರಿಹಾರ ನೀಡಲಾಗುತ್ತಿದೆ. ಮನೆಗೆ ಮತ್ತು ಮನೆ ವಸ್ತುಗಳಿಗೆ ಉಂಟಾಗುವ ಹಾನಿಗು ಕೂಡಾ ಪರಿಹಾರ ಒದಗಿಸಲಾಗುತ್ತದೆ.