ಉತ್ತರ ಪ್ರದೇಶ: ಪಿಸ್ತೂಲು ತೋರಿಸಿ ಮಹಿಳೆಯ ಸಾಮೂಹಿಕ ಅತ್ಯಾಚಾರ

ಬಂಡಾ(ಉ.ಪ್ರ),ಜ.6: ಮೂವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಮಹಿಳೆಯೋರ್ವಳ ಪತಿ ಮತ್ತು ಮೈದುನನಿಗೆ ಪಿಸ್ತೂಲು ತೋರಿಸಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡು ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ಇಲ್ಲಿಯ ಭಡವಾಲ್ ಗ್ರಾಮದ ಬಳಿಯ ಅರಣ್ಯದಲ್ಲಿ ನಡೆದಿದೆ.
ಚಿತ್ರಕೂಟ ಜಿಲ್ಲೆಯ ನಿವಾಸಿಯಾಗಿರುವ ಮಹಿಳೆ ಶುಕ್ರವಾರ ತಮ್ಮ ಸಂಬಂಧಿಗಳನ್ನು ಭೇಟಿಯಾಗಲು ತನ್ನ ಪತಿ ಮತ್ತು ಮೈದುನನೊಂದಿಗೆ ಇಲ್ಲಿಯ ಗೌರಿಖಾನ್ಪುರ್ ಗ್ರಾಮಕ್ಕೆ ಭೇಟಿ ನೀಡಿದ್ದಳು. ಅವರು ಸ್ವಗ್ರಾಮಕ್ಕೆ ಮರಳುವ ಮಾರ್ಗದಲ್ಲಿ ಬಂಡಾ-ಚಿತ್ರಕೂಟ ಗಡಿಯಲ್ಲಿನ ನದಿಯನ್ನು ದಾಟುತ್ತಿದ್ದಾಗ ದುಷ್ಕರ್ಮಿಗಳು ಪಿಸ್ತೂಲು ತೋರಿಸಿ ಮಹಿಳೆ ಯನ್ನು ಅರಣ್ಯದಲ್ಲಿಯ ಗುಡಿಸಲಿಗೆ ಒಯ್ದು ಈ ಕೃತ್ಯವೆಸಗಿ ಪರಾರಿಯಾಗಿದ್ದಾರೆ ಎಂದು ಎಎಸ್‌ಪಿ ಲಾಲ್ ಭರತಕುಮಾರ ಪಾಲ್ ಶನಿವಾರ ಇಲ್ಲಿ ತಿಳಿಸಿದರು.
ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Next Story