ಸರಕಾರಿ ಪ್ರಾಯೋಜಿತ ಚುನಾವಣಾ ಪ್ರಚಾರ ಸಭೆ ನಿಲ್ಲಿಸಿ: ಮುಖ್ಯಮಂತ್ರಿಗೆ ಶೋಭಾ ಕರಂದ್ಲಾಜೆ ಒತ್ತಾಯ

ಬೆಂಗಳೂರು, ಜ. 6: ಸಾಧನಾ ಸಮಾವೇಶದ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಸರಕಾರಿ ಪ್ರಾಯೋಜಿತ ಚುನಾವಣಾ ಪ್ರಚಾರ ಸಭೆಗಳನ್ನು ಕೂಡಲೇ ನಿಲ್ಲಿಸಬೇಕು. ಈಗಾಗಲೇ ನಡೆಸಿರುವ ಸಭೆಗೆ ಮಾಡಲಾದ ವೆಚ್ಚವನ್ನು ಕಾಂಗ್ರೆಸ್ ಪಕ್ಷದಿಂದ ವಸೂಲಿ ಮಾಡಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಆಡಳಿತ ಪಕ್ಷವು ರಾಜ್ಯ ಸರಕಾರದ ಹಣವನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ, ಸಿದ್ದರಾಮಯ್ಯ ಕೈಗೊಂಡಿರುವ ರಾಜ್ಯ ಪ್ರವಾಸ ಇದಕ್ಕೆ ತದ್ವಿರುದ್ಧವಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಸರಕಾರವೇ ಜಿಲ್ಲಾಡಳಿತದ ಮೂಲಕ ಪ್ರವಾಸದ ವೆಚ್ಚ ಭರಿಸುತ್ತಿದೆ ಎಂದು ಟೀಕಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸರಕಾರದ ಸಾಧನೆಗಳ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ವಿಪಕ್ಷಗಳು ಹಾಗೂ ಪ್ರಧಾನಿ ಮೋದಿಯವರನ್ನು ತೆಗಳಲು ವೇದಿಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಿಎಂ ರಾಜ್ಯ ಪ್ರವಾಸವನ್ನು ಪ್ರಶ್ನಿಸಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಸೋಮವಾರ ವಿಚಾರಣೆಗೆ ಬರಲಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಅಧಿಕಾರ ದುರ್ಬಳಕೆ ಮಾಡಿ ಸರಕಾರಿ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿರುವುದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಲಿದೆ ಎಂಬ ವಿಶ್ವಾಸವಿದೆ. ಆದುದರಿಂದ ಸಿಎಂ ಸಿದ್ದರಾಮಯ್ಯ ತಕ್ಷಣವೇ ಸರಕಾರಿ ಪ್ರಾಯೋಜಿತ ಚುನಾವಣಾ ಪ್ರಚಾರ ಸಭೆಗಳನ್ನು ನಿಲ್ಲಿಸಬೇಕೆಂದು ಶೋಭಾ ಕರಂದ್ಲಾಜೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.







