ಆದಿತ್ಯನಾಥ್ ನಿವಾಸದ ಮುಂಭಾಗ ಕ್ವಿಂಟಾಲ್ ಗಟ್ಟಲೆ ಆಲೂಗಡ್ಡೆ ಸುರಿದ ಕೃಷಿಕರು
ಉತ್ತರ ಪ್ರದೇಶ ಸರಕಾರದ ವಿರುದ್ಧ ಆಕ್ರೋಶ

ಲಕ್ನೊ, ಜ.6: ತಾವು ಬೆಳೆದ ಆಲೂಗಡ್ಡೆಗೆ ನ್ಯಾಯಯುತ ಬೆಲೆ ನಿಗದಿಗೊಳಿಸಬೇಕೆಂದು ಆಗ್ರಹಿಸುತ್ತಿರುವ ಉತ್ತರಪ್ರದೇಶದ ರೈತರು ಶನಿವಾರ ಭಾರೀ ಭದ್ರತೆಯುಳ್ಳ ಮುಖ್ಯಮಂತ್ರಿ ಆದಿತ್ಯನಾಥ್ ನಿವಾಸದ ಎದುರುಗಡೆ ಕಿಂಟಾಲ್ ಗಟ್ಟಲೆ ಆಲೂಗಡ್ಡೆಗಳನ್ನು ಎಸೆಯುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಬಿಗಿ ಭದ್ರತೆಯುಳ್ಳ ಮುಖ್ಯಮಂತ್ರಿಗಳ ಸರಕಾರಿ ನಿವಾಸದೆದುರು ರೈತರು ಆಲೂಗಡ್ಡೆ ಸುರಿದಿರುವುದು ಸರಕಾರವನ್ನು ಪೇಚಿಗೆ ಸಿಲುಕಿಸಿದೆ. ಎದುರಿನ ರಸ್ತೆಯಲ್ಲಿ ವಾಹನಗಳಲ್ಲಿ ಆಗಮಿಸಿದ ರೈತರು ದೂರದಿಂದಲೇ ಆಲೂಗಡ್ಡೆಗಳನ್ನು ಮುಖ್ಯಮಂತ್ರಿಗಳ ನಿವಾಸದತ್ತ ಎಸೆದಿದ್ದಾರೆ. ಈ ವಾಹನಗಳನ್ನು ಗುರುತಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲಕ್ನೊದ ಹಿರಿಯ ಪೊಲೀಸ್ ಅಧೀಕ್ಷಕ ದೀಪಕ್ ಕುಮಾರ್ ತಿಳಿಸಿದ್ದಾರೆ.
ಇದೊಂದು ಸಾಂಕೇತಿಕ ಪ್ರತಿಭಟನೆ ಮಾತ್ರ. ನಾವು ಬೆಳೆದಿರುವ ಆಲೂಗಡ್ಡೆ ಹೊಲದಲ್ಲೇ ಕೊಳೆಯುತ್ತಿದೆ. ‘ಮಂಡಿ’ಗಳಲ್ಲಿ ಒಂದು ಕ್ವಿಂಟಾಲ್‌ಗೆ ಕೇವಲ 3ರಿಂದ 4 ರೂ. ದರ ನಿಗದಿಪಡಿಸಲಾಗಿದೆ. ಆದರೆ ಕನಿಷ್ಟ 10 ರೂ. ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಉತ್ತರಪ್ರದೇಶದ ಬಿಜೆಪಿ ಸರಕಾರ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಈ ರೀತಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದೇವೆ ಎಂದು ರೈತರು ತಿಳಿಸಿದ್ದಾರೆ. ರಾಜ್ಯ ಸರಕಾರ ಚುನಾವಣೆ ಸಂದರ್ಭ ನೀಡಿದ್ದ ಭರವಸೆಯನ್ನು ಮರೆತುಬಿಟ್ಟಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಹರ್ನಾಮ್ ಸಿಂಗ್ ವರ್ಮ ದೂರಿದ್ದಾರೆ.
ಈ ಆರೋಪವನ್ನು ತಳ್ಳಿ ಹಾಕಿರುವ ಉ.ಪ್ರದೇಶದ ಕೃಷಿ ಸಚಿವ ಸೂರ್ಯಪ್ರತಾಪ್ ಶಾಹಿ, ಆದಿತ್ಯನಾಥ್ ನೇತೃತ್ವದ ಸರಕಾರ ರೈತರ ಪರವಾಗಿದೆ. ಇದನ್ನು ಸಹಿಸದೆ ಕೆಲವರು ಸರಕಾರಕ್ಕೆ ಕೆಟ್ಟ ಹೆಸರು ತರಲು ರಾಜಕೀಯ ಸಂಚು ನಡೆಸಿದ್ದಾರೆ ಎಂದಿದ್ದಾರೆ.