ಹನೂರು: ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಸಚಿವರಿಂದ ಸ್ಥಳ ಪರಿಶೀಲನೆ

ಹನೂರು,ಜ.6: ಹನೂರು ನೂತನ ತಾಲೂಕು ಘೋಷಣೆ, ಮಹತ್ವಾಕಾಂಕ್ಷೆಯ ಅಭಿವೃದ್ದಿ ಕಾರ್ಯಗಳು ಸೇರಿದಂತೆ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆಗೆ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಗೀತಾ ಮಹದೇವಪ್ರಸಾದ್‍ರವರು ಸರ್ಕಾರದ ಸಾಧನಾ ಸಮಾರಂಭ ನಡೆಯುವ ಮಲೈಮಹದೇಶ್ವರ ಕ್ರೀಡಾಂಗಣ ಹಾಗೂ ಮಂಗಲ ಸಮೀಪದ ಹುಲುಸುಗುಡ್ಡೆ ಬಳಿ ಹ್ಯಾಲಿಪ್ಯಾಡ್‍ನ್ನು ನಿರ್ಮಿಸುವ ಸ್ಥಳವನ್ನು ಪರಿಶೀಲಿಸಿದರು.
ನಂತರ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದೇ ದಿನದಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳನ್ನು ನೆರವೇರಿಸುವುದರಿಂದ ಸಮಯದ ಅಭಾವವಿರುವ ಹಿನ್ನಲೆಯಲ್ಲಿ, ಎಲ್ಲಾ ಕಡೆ ಹೆಲಿಕಾಪ್ಟರ್ ಮೂಲಕ ಆಗಮಿಸುವುದರಿಂದ ಸೂಕ್ತ ಸ್ಥಳಗಳಲ್ಲಿ ಹೆಲಿಪ್ಯಾಡ್ ನಿರ್ಮಿಸುವ ಸಂಬಂಧ ಅಧಿಕಾರಿಗಳಿಗೆ ಸೂಚಿಸಿದರು. ಮತ್ತು ಹನೂರಿನಿಂದ ಮಲೆಮಹದೇಶ್ವರ ಬೆಟ್ಟಕ್ಕೆ ರಸ್ತೆ ಸಂಚಾರದ ಮೂಲಕ ಸಾಗಿ ಅಲ್ಲಿ ವಾಸ್ತವ್ಯ ಹೂಡಿ, ಮುಂಜಾನೆ ಮಲೆಮಹದೇಶ್ವರ ಸ್ವಾಮಿಯ ದರ್ಶನ ಪಡೆದು ಮಲೆಮಹದೇಶ್ವರ ಪ್ರಾಧಿಕಾರದ ಅಧ್ಯಕ್ಷರೂ ಕೂಡ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಾಧಿಕಾರದ ಸಭೆಯಲ್ಲಿ ಪಾಲ್ಗೊಂಡು ನಂತರ ಮಲೆಮಹದೇಶ್ವರ ಬೆಟ್ಟದ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕು ಸ್ಥಾಪನೆ, ಭೂಮಿಪೂಜೆ, ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುವರು ಎಂದು ತಿಳಿಸಿದರು.
ಮಲೆಮಹದೇಶ್ವರ ಬೆಟ್ಟದಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಸೂಚನೆ: ಮಲೆಮಹದೇಶ್ವರ ಬೆಟ್ಟದ ಅಭಿವೃದ್ದಿ ಕಾರ್ಯಕ್ರಮಗಳಲ್ಲಿ ಭಾಗಿಯಾದ ನಂತರ ಮಲೆಮಹದೇಶ್ವರ ಬೆಟ್ಟದಿಂದ ಮೈಸೂರು ಜಿಲ್ಲೆಗೆ ಹೆಲಿಕ್ಯಾಪ್ಟರ್ ಮುಖಾಂತರ ಪ್ರಯಾಣ ಬೆಳಸಲಿರುವ ಕಾರಣ ಮಲೆಮಹದೇಶ್ವರ ಬೆಟ್ಟದ ಸೂಕ್ತ ಸ್ಥಳದಲ್ಲಿ ಹೆಲಿಪ್ಯಾಡ್ ನಿರ್ಮಿಸಿ ಎಂದು ಅಧಿಕಾರಿಗಳಿಗೆ ಶಾಸಕ ನರೇಂದ್ರರವರು ಸೂಚಿಸಿದರು.
ಇದೆ ಸಂದರ್ಭದಲ್ಲಿ ಸಂಸದ ಧ್ರುವನಾರಾಯಣ್, ಜಿ.ಪಂ.ಅಧ್ಯಕ್ಷ ರಾಮಚಂದ್ರು, ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ, ತಾ.ಪಂ.ಅಧ್ಯಕ್ಷ ರಾಜು, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಜಾವಾದ್ ಅಹಮ್ಮದ್,ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಹರೀಶ್‍ಕುಮಾರ್, ಉಪವಿಭಾಗಧಿಕಾರಿ ಫೌಜಿಯಾ ತರನಮ್, ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್‍ಮೀನಾ, ಅಪರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾಪ್ರಸನ್ನ, ತಹಸೀಲ್ದಾರ್ ಕಾಮಾಕ್ಷಮ್ಮ ವಿಶೇಷ ತಹಸೀಲ್ದಾರ್ ಮಹದೇವಸ್ವಾಮಿ, ಪ.ಪಂ.ಮುಖ್ಯಾಧಿಕಾರಿ ಎಸ್.ಡಿ.ಮೋಹನ್‍ಕೃಷ್ಣ, ಹನೂರು ಠಾಣೆಯ ವೃತ್ತ ನಿರೀಕ್ಷಕ ಪರುಶುರಾಮ್, ಮುಖಂಡರಾದ ಸಿಂಗನಲ್ಲೂರು ಬಾಬು, ಮಹೇಶ್, ನಂಜುಂಡೆಗೌಡ ರಮೇಶ್ ಮಹದೇವ, ಲೊಕ್ಕನಹಳ್ಳಿ ರವಿಕುಮಾರ್, ಮಂಗಲ ಪುಟ್ಟರಾಜು, ಬಾಳಗುಣಸೆ ಮಂಜುನಾಥ್, ಬಾಲರಾಜ್‍ನಾಯ್ಡು, ಇನ್ನಿತರರು ಹಾಜರಿದ್ದರು.







