ಲಾಲೂ ಪುತ್ರಿ ವಿರುದ್ಧ ಎರಡನೇ ದೂರು ದಾಖಲಿಸಿದ ಜಾರಿ ನಿರ್ದೇಶನಾಲಯ

ಹೊಸದಿಲ್ಲಿ, ಜ.6: ಹಣ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮೀಸ ಭಾರ್ತಿ ಮತ್ತವರ ಪತಿಯ ವಿರುದ್ಧ ಜಾರಿ ನಿರ್ದೇಶನಾಲಯವು ಎರಡನೇ ಪ್ರಕರಣವನ್ನು ದಾಖಲಿಸಿದೆ. ದಿಲ್ಲಿ ನ್ಯಾಯಾಲಯವು ಈ ಎರಡೂ ಪ್ರಕರಣಗಳ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿದೆ.
ಹಣ ವಂಚನೆಗೆ ಸಂಬಂಧಪಟ್ಟಂತೆ ಮೀಸ ಭಾರ್ತಿ ಮತ್ತವರ ಪತಿ ಶೈಲೇಶ್ ಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯವು ಪದೇಪದೇ ದೋಷಾರೋಪ ಪಟ್ಟಿ ಸಲ್ಲಿಸುತ್ತಿರುವುದರಿಂದ ಅಸಮಾಧಾನಗೊಂಡ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಎನ್.ಕೆ ಮಲ್ಹೊತ್ರಾ ಅವರು ತನಿಖಾ ತಂಡವನ್ನು ತರಾಟೆಗೆ ತೆಗೆದುಕೊಂಡ ಬಗ್ಗೆಯೂ ವರದಿಯಾಗಿದೆ.
ಈ ಪ್ರಕರಣದಲ್ಲಿ ಮತ್ತಷ್ಟು ಮಾಹಿತಿಗಳನ್ನು ಒಪ್ಪಿಸಲು ಸಮಯಾವಕಾಶ ಬೇಕಾಗಿದೆ ಎಂದು ಜಾರಿ ನಿರ್ದೇಶನಾಲಯದ ವಿಶೇಷ ಸಲಹೆಗಾರರಾದ ಅತುಲ್ ತ್ರಿಪಾಠಿ ಮನವಿ ಮಾಡಿದ ಕಾರಣ ನ್ಯಾಯಾಲಯವು ಡಿಸೆಂಬರ್ 23ರಂದು ಮತ್ತು ಜನವರಿ 6ರಂದು ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ದೋಷಾರೋಪ ಪಟ್ಟಿಗಳ ವಿಚಾರಣೆಯನ್ನು ಫೆಬ್ರವರಿ ಐದಕ್ಕೆ ಮುಂದೂಡಿದೆ.





