ಬಿಜೆಪಿ ಗೆಲುವಿಗೆ ತಂತ್ರ: ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಭೇಟಿ ಮಾಡಿದ ಸದಾನಂದಗೌಡ
ಮೈಸೂರು,ಜ.6. ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರನ್ನು ಅವರ ನಿವಾಸದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಭೇಟಿ ಮಾಡಿ ಮುಂದಿನ ವಿಧಾನಸಭಾ ಚುನಾವಣೆಗೆ ಯಾವ ರೀತಿ ತಂತ್ರ ಹಣೆಯಬೇಕು ಎಂದು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದರು.
ವರುಣಾ ವಿಧಾನಸಭಾ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಸಚಿವ ಸದಾನಂದಗೌಡ ಶನಿವಾರ ವರುಣಾ ವ್ಯಾಪ್ತಿಯ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಮುಖಂಡರ ಜೊತೆ ಮಾತುಕತೆ ನಡೆಸಿದರು. ನಂತರ ವಿ.ಶ್ರೀನಿವಾಸಪ್ರಸಾದ್ ಅವರನ್ನು ಭೇಟಿ ಮಾಡಿದ ಅವರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಯಾವ ರೀತಿ ಕಾಂಗ್ರೆಸ್‍ನ್ನು ಹಣಿಯಬೇಕು ಎಂಬುದರ ಕುರಿತು ಮಾತುಕತೆ ನಡೆಸಿದರು.
ಇದೇ ವೇಳೆ ಚಾಮರಾಜನಗರ ಜಿಲ್ಲೆಯ ಪ್ರತಿಯೊಂದು ಕ್ಷೇತ್ರದ ಇಂಚಿಂಚು ಮಾಹಿತಿಯನ್ನು ಶ್ರೀನಿವಾಸ್ ಪ್ರಸಾದ್ ಡಿವಿಎಸ್ ಗೆ ನೀಡಿದರು. ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ. ಆದರೆ, ಅಲ್ಲಿನ ಬಿಜೆಪಿಯ ಮುಖಂಡರ ಭಿನ್ನಾಭಿಪ್ರಾಯ ಹೆಚ್ಚಿದೆ, ಹೀಗಾಗಿ ಬಿಜೆಪಿ ಅಲ್ಲಿ ಸೋಲು ಕಾಣುತ್ತಿದೆ. ಮೈಸೂರು ಜಿಲ್ಲೆಯಲ್ಲಿ ವರುಣಾ ಮತ್ತು ನಂಜನಗೂಡಿನಲ್ಲಿ ಬಿಜೆಪಿಗೆ ಗೆಲುವು ಖಂಡಿತ ಸಿಗಲಿದೆ. ಅದರಲ್ಲೂ ವರುಣದಲ್ಲಿ ನಮ್ಮ ಪಕ್ಷದ ಜಿ.ಪಂ, ತಾ,ಪಂ ಸದಸ್ಯರೇ ಹೆಚ್ಚಿದ್ದಾರೆ, ಅಲ್ಲಿ ನಾವು ಗೆಲುವಿನ ಗಡಿ ದಾಟಬಹುದು. ಆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ದಲಿತರ ಮತಗಳನ್ನು ಶೇ, 70 ರಷ್ಟು ಪಡೆಯುತ್ತಿದ್ದು, ಆತನ ಗೆಲುವು ಲೀಡ್ ನಲ್ಲಿ ಮುಂದುವರಿಯುತ್ತಿತ್ತು. ಆದರೆ ಇದೀಗ ಆ ಮತಗಳನ್ನು ವಿಭಜನೆ ಮಾಡಿ, ಅಷ್ಟೊಂದು ಶೇಕಡಾವಾರು ಮತಗಳು ಹೋಗೋದಕ್ಕೆ ನಾನು ಬಿಡುವುದಿಲ್ಲ. ಹೀಗಾಗಿ ಕ್ಷೇತ್ರದ ಕೆಲ ದಲಿತ ಮುಖಂಡರನ್ನು ನಿರಂತರವಾಗಿ ಭೇಟಿ ಮಾಡುತ್ತಿದ್ದೇನೆ. ಅಪ್ಪ- ಮಕ್ಕಳನ್ನು ಸೋಲಿಸುವುದೇ ನಮ್ಮ ಗುರಿಯಾಗಿದ್ದು, ಅದಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಾ ಇದ್ದೇನೆ ಎಂದು ಮೈಸೂರು ಭಾಗದ ಚುನಾವಣಾ ಸಮೀಕ್ಷೆಯನ್ನು ಡಿ.ವಿ.ಸದಾನಂದಗೌಡ ಅವರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.







