ವೈದ್ಯರು ವ್ಯಾಪಾರಿ ಮನೋಭಾವ ಹೊಂದದೇ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು: ವಜೂಬಾಯಿ ರೂಢಾಬಾಯಿ ವಾಲಾ

ಮೈಸೂರು,ಜ.6: ವೈದ್ಯರು ವ್ಯಾಪಾರಿ ಮನೋಭಾವ ಹೊಂದದೇ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ರಾಜ್ಯಪಾಲ ವಜೂಬಾಯಿ ರೂಢಾಬಾಯಿ ವಾಲಾ ತಿಳಿಸಿದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ ಭಾರತ ವಾಕ್ ಮತ್ತು ಶ್ರವಣ ಸಂಘದ 50ನೇ ವಾರ್ಷಿಕ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರಿದ್ದು ಬಡವರ ಸೇವೆ ಮಾಡುವುದು ವೈದ್ಯರ ಕರ್ತವ್ಯ ಎಂದು ತಿಳಿಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಸಂಶೋಧನೆಗಳು ನಡೆಯಬೇಕು. ಹೆಚ್ಚು ಹೆಚ್ಚು ಸಂಶೋಧನೆಗಳು ನಡೆದರೆ ಚಿಕಿತ್ಸೆಯ ವೆಚ್ಚ ಕಡಿಮೆಯಾಗಲು ಸಾಧ್ಯ. ಬಡವರಿಗೂ ಅನುಕೂಲವಾಗಲಿದೆ. ನಾವೀಗ ಶ್ರವಣ ಸಾಧನಗಳನ್ನು ಹೊರದೇಶಗಳಿಂದ ತರಿಸಿಕೊಳ್ಳುತ್ತಿದ್ದೇವೆ. ಅವುಗಳನ್ನು ನಮ್ಮಲ್ಲಿಯೇ ಸಿದ್ಧಗೊಳಿಸಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು. ನಮ್ಮಲ್ಲೇ ತಯಾರಿಸಲು ಸಾಧ್ಯವಾದರೆ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ವಿದೇಶಿ ವಸ್ತುಗಳನ್ನು ಅವಲಂಬಿಸುವುದು ತಪ್ಪಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾಧಕರಿಗೆ ಎನ್.ರತ್ನಪ್ರಶಸ್ತಿ, ಎಸ್.ಕಾಮೇಶ್ವರಪ್ರಶಸ್ತಿ, ಆರ್.ಕೆ.ಓಜಾ, ಭಾರತ್ ಪ್ರಶಸ್ತಿಗಳನ್ನು ಮತ್ತು ಎಸ್.ಆರ್.ಫೆಲೋಷಿಪ್ ನ್ನು ಪ್ರಧಾನಿಸಲಾಯಿತು. ಇದೇ ವೇಳೆ ರಾಜ್ಯಪಾಲರು ಇ ಸ್ಮರಣಿಕೆಯನ್ನು ಬಿಡುಗಡೆ ಮಾಡಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಇಂದ್ರನೀಲ್ ಚಟರ್ಜಿ, ಎಸ್.ಪಿ.ಗೋಪಿಸ್ವಾಮಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಆಶಾ ಯತಿರಾಜ್ ಮತ್ತಿತರರು ಉಪಸ್ಥಿತರಿದ್ದರು.





