ಜ.12 ರಂದು ಮಂಡ್ಯ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ: ಅಗತ್ಯ ಸಿದ್ದತೆಗೆ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸೂಚನೆ

ಮಂಡ್ಯ, ಜ.6: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗು ಉದ್ಘಾಟನೆಗೆ ಜ.12 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸುತ್ತಿದ್ದು, ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿದ ಅವರು ಮುಖ್ಯಮಂತ್ರಿಯವರ ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಮಳವಳ್ಳಿ, ಶ್ರೀರಂಗಪಟ್ಟಣ ಹಾಗು ಕೆ.ಆರ್.ಪೇಟೆಗೆ ತಾಲೂಕುಗಳಿಗೆ ಭೇಟಿ ನೀಡಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಸಂಬಂಧಪಟ್ಟ ಅಧಿಕಾರಿಗಳು ಗೊಂದಲಗಳಿಗೆ ಅವಕಾಶ ನೀಡದೆ, ಶಿಷ್ಠಚಾರದಂತೆ ಇಲಾಖಾ ಸಚಿವರು ಹಾಗು ಅಧಿಕಾರಿಗಳನ್ನು ಆಹ್ವಾನಿಸಬೇಕು. ಫಲಾನುಭವಿಗಳನ್ನು ವೇದಿಕೆಗೆ ಕರೆತರಬೇಕು ಸವಲತ್ತು ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಶರತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜು, ಉಪ ವಿಭಾಗಾಧಿಕಾರಿಗಳಾದ ರಾಜೇಶ್, ಯಶೋಧಾ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪ್ರೇಮ್‍ಕುಮಾರ್, ಕೃಷ್ಣರಾಜು ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.







