ಉಡುಪಿ: ಗೋಸಂರಕ್ಷಣೆಗಾಗಿ 50 ಕ್ಕೂ ಅಧಿಕ ಸಂತರಿಂದ ರಕ್ತಾಕ್ಷರ

ಉಡುಪಿ, ಜ.6: ದೇಶದಲ್ಲಿ ಗೋವಿನ ರಕ್ತ ಹರಿಯುವುದನ್ನು ತಡೆಯುವ ಸಲುವಾಗಿ ನಾಡಿನ 50ಕ್ಕೂ ಅಧಿಕ ಸಂತರು ಈಗಾಗಲೇ ರಕ್ತಾಕ್ಷರದಲ್ಲಿ ಗೋ ಸಂರಕ್ಷಣೆಯ ಹಸ್ತಾಕ್ಷರ ಬರೆದು ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಮುಂದಾಗಿದ್ದಾರೆ ಎಂದು ಗೋಕರ್ಣ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕಟಿಸಿದ್ದಾರೆ.
ರಥಬೀದಿಯ ಶ್ರೀಪರವಿದ್ಯಾ ಮಂಟಪದಲ್ಲಿ ಇಂದು ಸಂಜೆ ಹಮ್ಮಿಕೊಂಡಿದ್ದ ಅಭಯ ಗೋಯಾತ್ರೆ ಸಂದೇಶ ಸಭೆಯಲ್ಲಿ ಅವರು ಆಶೀರ್ಚನ ನೀಡಿದ ಮಾತನಾಡುತಿದ್ದರು.
ನೂರಾರು ಮಂದಿ ಗೋಭಕ್ತರು ನಮ್ಮನ್ನಾಳುವವರನ್ನು ಬಡಿದೆಬ್ಬಿಸುವ ಸಲುವಾಗಿ ರಕ್ತಾಕ್ಷರ ನೀಡಲು ಮುಂದಾಗಿದ್ದಾರೆ. ಸ್ವರಕ್ತ ಲಿಖಿತ ಅಭಯಾಕ್ಷರ ಹಕ್ಕೊತ್ತಾಯ ಪತ್ರಗಳು ಬೃಹತ್ ಸುನಾಮಿಯಾಗಿ ಹರಿಯುವ ಮೂಲಕ ಗೋವಿನ ಸಂಕಷ್ಟ ಕೊಚ್ಚಿಕೊಂಡು ಹೋಗಲಿದೆ. ನಮ್ಮನ್ನು ಆಳುವ ವರ್ಗವನ್ನು ಬಡಿದೆಬ್ಬಿಸುವಲ್ಲಿ, ಅವರ ಮನ ಪರಿವರ್ತಿಸುವಲ್ಲಿ ಈ ಅಭಿಯಾನ ಮಹತ್ವದ ಪಾತ್ರ ವಹಿಸಲಿದೆ ಎಂದರು.
ಉಡುಪಿ ಜಿಲ್ಲಾ ಗೋಪರಿವಾರದ ಅಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲೆಯಲ್ಲಿ ಸಂಗ್ರಹವಾದ ಒಂದು ಲಕ್ಷ ಅಭಯಾಕ್ಷರಗಳನ್ನು ಗೋಮಾತೆಗೆ ಸಮರ್ಪಿಸಲಾಯಿತು. ದೊಡ್ಡ ಸಂಖ್ಯೆ ಯಲ್ಲಿ ರಕ್ತದಲ್ಲಿ ಹಕ್ಕೊತ್ತಾಯ ಪತ್ರ ಮಂಡಿಸಿ ಸರಕಾರದ ಗಮನ ಸೆಳೆಯಲು ಜಿಲ್ಲಾ ಗೋಪರಿವಾರ ನಿರ್ಧರಿಸಿದೆ ಎಂದವರು ಪ್ರಕಟಿಸಿದರು.
ನಾರಾಯಣ ಮಣಿಯಾಣಿ, ಶ್ರೀಮಠದ ಜಿಲ್ಲಾ ಸಂಪರ್ಕಾಧಿಕಾರಿ ಗುಣವಂತೇಶ್ವರ ಭಟ್, ಎಸ್.ಜಿ.ಕಾರ್ಣಿಕ್, ಭಾರತೀಯ ಗೋ ಪರಿವಾರ- ಕರ್ನಾಟಕದ ಪದಾಧಿಕಾರಿಗಳಾದ ಮಹೇಶ್ ಚಟ್ನಳ್ಳಿ, ಡಾ.ರವಿ, ಮಧು ಗೋಮತಿ, ಶಿಶಿರ್ ಹೆಗಡೆ, ಅರವಿಂದ ಬಂಗಲಗಲ್ಲು, ವಿನಾಯಕ ತಲವಟ್ಟ, ಉದಯಶಂಕರ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಜೋಡುಕಟ್ಟೆಯಿಂದ ಶ್ರೀಕೃಷ್ಣಮಠದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ಗಣಪತಿ ಜೋಯಿಸ್ ಸಂಗಡಿಗರು ವೇಘೋಷ ನಡೆಸಿಕೊಟ್ಟರು.







