ಅಮೆರಿಕದ ಈಶಾನ್ಯ ಭಾಗದಲ್ಲಿ ಭೀಕರ ಹಿಮ ಬಿರುಗಾಳಿ
ಮೈನಸ್ 40 ಡಿಗ್ರಿಗೆ ಕುಸಿದ ಉಷ್ಣತೆ; 18 ಸಾವು

ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್, ಜ. 6: ಅಮೆರಿಕದ ಈಶಾನ್ಯ ಭಾಗಕ್ಕೆ ಭೀಕರ ಹಿಮ ಬಿರುಗಾಳಿ ಅಪ್ಪಳಿಸಿದ ಬಳಿಕ ಈ ವಲಯದ ಉಷ್ಣತೆ ಕುಸಿದಿದೆ. ಮಂಜುಗಟ್ಟಿದ ವಾತಾವರಣದಿಂದಾಗಿ ಈಗಾಗಲೇ ಇಲ್ಲಿ 18 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಭೀಕರ ಶೀತ ಮಾರುತವು ನ್ಯೂ ಇಂಗ್ಲೆಂಡ್ನಿಂದ ದೇಶದ ಮಧ್ಯಪಶ್ಚಿಮಕ್ಕೆ ಹಾಗೂ ಅಲ್ಲಿಂದ ಮುಂದಕ್ಕೆ ಕ್ಯಾರಲೈನ್ ರಾಜ್ಯಗಳವರೆಗೆ ವ್ಯಾಪಿಸಲಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ.
ಅಮೆರಿಕದ ಈಶಾನ್ಯ ಭಾಗದಲ್ಲಿ ಮುಂದಿನ ಹಲವು ದಿನಗಳ ಕಾಲ ಉಷ್ಣತೆಯು ಸಾಮಾನ್ಯ ಸರಾಸರಿಯಿಂದ 20-30 ಡಿಗ್ರಿ ಸೆಲ್ಸಿಯಸ್ನಷ್ಟು ಕುಸಿಯುವ ನಿರೀಕ್ಷೆಯಿದೆ.
ಬಾಲ್ಟಿಮೋರ್ನಿಂದ ಮೇನ್ ರಾಜ್ಯದ ಕ್ಯಾರಿಬೌವರೆಗೆ ರಸ್ತೆಯಲ್ಲಿರುವ ಮಂಜು ಮತ್ತು ಹಿಮವನ್ನು ತೆಗೆಯಲು ಕಾರ್ಮಿಕರು ಶ್ರಮಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಸೂರ್ಯಾಸ್ತದ ಬಳಿಕ ಉಷ್ಣತೆಯು ಮೈನಸ್ 40 ಡಿಗ್ರಿ ಸೆಲ್ಸಿಯಸ್ಗೆ ಕುಸಿಯುವ ಸಾಧ್ಯತೆ ಇದೆ ಎಂದು ನ್ಯಾಶನಲ್ ವೆದರ್ ಸರ್ವಿಸ್ ತಿಳಿಸಿದೆ.
‘‘ಇದು ತುಂಬಾ ಅಪಾಯಕಾರಿಯಾಗಬಹುದಾಗಿದೆ’’ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ‘ಆ್ಯಕ್ಯೂವೆದರ್’ನ ಪರಿಣತ ಡ್ಯಾನ್ ಪಿಡಿನೊವ್ಸ್ಕಿ ಹೇಳಿದ್ದಾರೆ. ‘‘ದೇಹದ ಯಾವುದೇ ಭಾಗವು ಚಳಿಯ ಸಂಪರ್ಕಕ್ಕೆ ಬಂದರೆ ಎರಡೇ ನಿಮಿಷಗಳಲ್ಲಿ ಮರಗಟ್ಟುತ್ತದೆ’’ ಎಂದು ಅವರು ಹೇಳಿದ್ದಾರೆ.







