ಜ.8ರಂದು ಉಡುಪಿ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ
ಉಡುಪಿ, ಜ.6: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಜ.8ರ ಸೋಮವಾರದಂದು ಉಡುಪಿ ಜಿಲ್ಲೆಯ ವಿವಿದೆಡೆಗಳಲ್ಲಿ ನಡೆಯುವ ಸಾಧನಾ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ.
ಬೈಂದೂರಿನ ಪ್ರೌಢಶಾಲೆಯ ಎದುರಿನ ಗಾಂಧಿ ಮೈದಾನದಲ್ಲಿ ಸಾಧನಾ ಸಮಾವೇಶ ಬೆಳಗ್ಗೆ 10:45ಕ್ಕೆ ಆರಂಭಗೊಳ್ಳಲಿದ್ದು, ಈಗಾಗಲೇವಿಶಾಲ ವೇದಿಕೆ, ಬೃಹತ್ ಪೆಂಡಾಲ್ ನಿರ್ಮಾಣವಾಗುತ್ತಿದೆ. ಕನಿಷ್ಠ 20 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇನ್ನೊಂದೆಡೆ ಕ್ಷೇತ್ರದ ಎಲ್ಲ ಮೂಲೆಗಳಿಂದ ಬೃಹತ್ ಬೆಕ್ ಜಾಥಾ ಸಮಾವೇಶ ನಡೆಯಲಿದೆ.
ಬೈಂದೂರಿನಲ್ಲಿ 490.97 ಕೋಟಿ ರೂ. ಮೊತ್ತದ 36 ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ನಡೆಯಲಿದೆ. ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ 11, ಶಿಕ್ಷಣ ಇಲಾಖೆಯ 7, ಯೋಜನಾ ವಿಭಾಗದ 6, ಆರೋಗ್ಯ ಇಲಾಖೆಯ 3, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಮತ್ತು ಸಣ್ಣ ನೀರಾವರಿ ಇಲಾಖೆಯ ತಲಾ 2, ಜಲಸಂಪನ್ಮೂಲ ಇಲಾಖೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಸಮಾಜಕಲ್ಯಾಣ ಇಲಾಖೆ, ಬಂದರು ಮತ್ತು ಮೀನುಗಾರಿಕಾ ಇಲಾೆಯ ತಲಾ ಒಂದು ಕಾಮಗಾರಿ ಸೇರಿವೆ.
ನಂತರ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡುವ ಮುಖ್ಯಮಂತ್ರಿ ಅಪರಾಹ್ನ 2 ಗಂಟೆಗೆ ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಉಡುಪಿ ಕ್ಷೇತ್ರದ ಒಟ್ಟು 509 ಕೋಟಿ ರೂ.ಮೊತ್ತದ ಕಾಮಗಾರಿಗೆ ಶಿಲಾನ್ಯಾಸ ಮಾಡಲಿದ್ದು, 72 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರಕ್ಕೆ ಸಂಜೆ 4ಗಂಟೆಗೆ ಭೇಟಿ ನೀಡುವ ಅವರು ಕಾಪು ಕ್ಷೇತ್ರದಲ್ಲಿ ಅನುಷ್ಟಾನಗೊಳ್ಳಲಿರುವ 445 ಕೋಟಿ ರೂ. ವೆಚ್ಚದ ನಾನಾ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ಮಾಡಲಿದ್ದಾರೆ. ಬಂಗ್ಲೆ ಮೈದಾನ ಬಳಿ 5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಕಾಪು ಪುರಸಭೆಯ ಕಟ್ಟಡ ಉದ್ಘಾಟನೆ, 400 ಕೋಟಿ ರೂ ವೆಚ್ಚದಲ್ಲಿ ಬೆಳಪುನಲ್ಲಿ ನಿರ್ಮಾಣ ಗೊಳ್ಳುವ ವಿಜ್ಞಾನ ಸಂಶೋಧನಾ ಕೇಂದ್ರದ ಕಾಮಗಾರಿಗೆ ಚಾಲನೆ ಇದರಲ್ಲಿ ಸೇರಿವೆ. ಇಲ್ಲಿ ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.







