ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ರಹಸ್ಯವಾಗಿ 3ನೆ ಮದುವೆಯಾದರೇ?

ಇಸ್ಲಾಮಾಬಾದ್, ಜ. 6: ತನಗೆ ಸ್ವಲ್ಪ ಸಮಯ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿದ್ದ ಮಹಿಳೆಯೊಬ್ಬರನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ಮದುವೆಯಾಗಿದ್ದಾರೆ ಎಂದು ಆ ದೇಶದ ದೈನಿಕ ‘ದ ನ್ಯೂಸ್’ ಶನಿವಾರ ವರದಿ ಮಾಡಿದೆ.
ಆದರೆ, ಈ ವರದಿ ಸುಳ್ಳು ಎಂಬುದಾಗಿ 65 ವರ್ಷದ ರಾಜಕಾರಣಿಯ ಸಹಾಯಕರು ಹೇಳಿದ್ದಾರೆ. ಈ ವಿಷಯದ ಬಗ್ಗೆ ಇಮ್ರಾನ್ ಏನೂ ಹೇಳಿಲ್ಲ.
ಲಾಹೋರ್‌ನಲ್ಲಿರುವ ಡಿಫೆನ್ಸ್ ಹೌಸಿಂಗ್ ಅಥಾರಿಟಿಯ ಸೈಕ್ಟರ್ ‘ವೈ’ನಲ್ಲಿರುವ ಮದುಮಗಳ ಆಪ್ತರೊಬ್ಬರ ಮನೆಯಲ್ಲಿ ಜನವರಿ 1ರ ರಾತ್ರಿ ಇಮ್ರಾನ್ ಮದುವೆಯಾಗಿದ್ದಾರೆ ಎಂದು ಹಲವು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
ಆದರೆ, ಮದುಮಗಳ ಹೆಸರನ್ನು ಪತ್ರಿಕೆ ಬಹಿರಂಗಪಡಿಸಿಲ್ಲ.
ಮಹಿಳೆ ಲಾಹೋರ್‌ನ ಗುಲ್ಬರ್ಗ್ ಪ್ರದೇಶದಲ್ಲಿ ವಾಸಿಸುತ್ತಿದ್ದು, ಆಧ್ಯಾತ್ಮಿಕ ಮಾರ್ಗದರ್ಶನ ಪಡೆಯುವುದಕ್ಕಾಗಿ ಅವರ ಮನೆಗೆ ಇಮ್ರಾನ್ ಹೋಗುತ್ತಿದ್ದರು ಎಂದು ಪತ್ರಿಕೆ ಹೇಳಿದೆ. ಎರಡು ವರ್ಷಗಳ ಹಿಂದೆ ಇಮ್ರಾನ್‌ಗೆ ಮಹಿಳೆಯ ಪರಿಚಯವಾಗಿತ್ತು.
ಈ ಮಹಿಳೆಗೆ ಸರಕಾರಿ ನೌಕರರೊಬ್ಬರ ಜೊತೆ ಈಗಾಗಲೇ ಮದುವೆಯಾಗಿತ್ತು. ತಮ್ಮ ಮದುವೆಯನ್ನು ರದ್ದುಪಡಿಸುವಂತೆ ಕೋರಿ ಮಹಿಳೆ ಕೆಲವು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು.
ಹೆಂಡತಿಯಿಂದ ಬೇರ್ಪಟ್ಟಿರುವುದನ್ನು ಅವರ ಮಾಜಿ ಗಂಡ ಖಚಿತಪಡಿಸಿದ್ದಾರೆ. ಆದರೆ, ‘ಆಧ್ಯಾತ್ಮಿಕ ಕಾರಣ’ಗಳಿಗಾಗಿ ಹಾಗೆ ಮಾಡಲಾಗಿದೆ ಎಂದು ಹೇಳಿರುವ ಅವರು, ತನ್ನ ಮಾಜಿ ಹೆಂಡತಿ ಇಮ್ರಾನ್ ಜೊತೆ ಮದುವೆ ಆಗಿರುವುದನ್ನು ತಳ್ಳಿಹಾಕಿದ್ದಾರೆ.
ಈ ಹಿಂದೆ 2015ರ ಜನವರಿಯಲ್ಲಿ ಇಮ್ರಾನ್ ಟಿವಿ ನಿರೂಪಕಿ ರೇಹಮ್ ಖಾನ್‌ರನ್ನು ಮದುವೆಯಾಗಿದ್ದರು. ಆದರೆ, 10 ತಿಂಗಳಲ್ಲಿ ವಿಚ್ಛೇದನದೊಂದಿಗೆ ಮದುವೆ ಕೊನೆಗೊಂಡಿತ್ತು.
ಮಾಜಿ ಕ್ರಿಕೆಟಿಗನ ಮೊದಲ ಮದುವೆ 1995ರಲ್ಲಿ ಬ್ರಿಟನ್‌ನ ಜೆಮೀಮಾ ಖಾನ್ ಜೊತೆ ನಡೆದಿತ್ತು. 2004ರಲ್ಲಿ ವಿಚ್ಛೇದನದೊಂದಿಗೆ ಅದು ಕೊನೆಗೊಂಡಿತ್ತು.







