ಕರ್ತವ್ಯ ನಿರ್ಲಕ್ಷ ಆರೋಪ: ಡಿಡಿಪಿಐ ಅಮಾನತು
ಚಿಕ್ಕಮಗಳೂರು, ಜ.6: ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ್ಯ ಹಾಗೂ ಆದೇಶ ಪಾಲನೆ ಮಾಡದೆ ದುರ್ನಡತೆ ತೋರಿದ್ದಾರೆ ಎಂದು ಆರೋಪಿಸಿ ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಜಿ.ಬಸವರಾಜು ಅವರನ್ನು ಶುಕ್ರವಾರ ಸರಕಾರ ಅಮಾನತುಪಡಿಸಿ ಆದೇಶಿಸಿದೆ.
ತರೀಕೆರೆ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ (ಬಿಆರ್‌ಸಿ) ವಿಜಯಕುಮಾರ್‌ರನ್ನು ತರೀಕೆರೆ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಹುದ್ದೆಯ ಹೆಚ್ಚುವರಿ ಪ್ರಭಾರಿಯಾಗಿ ಮಾಡುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶಿಸಿದ್ದರು. ಇದಕ್ಕೆ ಪ್ರೌಢಶಿಕ್ಷಣ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ತರೀಕೆರೆ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ(ಬಿಆರ್‌ಸಿ) ವಿಜಯಕುಮಾರ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಜಿ.ಬಸವರಾಜು ಅವರ ಬಳಿ ಅನುಮತಿ ಕೋರಿದ್ದರು. ಶಿಕ್ಷಣ ಸಚಿವರು ಈ ಕುರಿತು ಆದೇಶಿಸುವಂತೆ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದರೂ ಎನ್.ಜಿ.ಬಸವರಾಜು ಕಡೆಗಣಿಸಿದ್ದರು ಎನ್ನಲಾಗಿದೆ. ಈ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿ ಸರಕಾರ ಬಸವರಾಜು ಅವರನ್ನು ಜ.5ರಂದು ಅಮಾನತುಪಡಿಸಿ ಆದೇಶಿಸಿದೆ.
ಪ್ರತಿಭಟನೆ
ಎನ್.ಜಿ.ಬಸವರಾಜು ಅವರನ್ನು ಅಮಾನತುಪಡಿಸಿರುವ ಸರಕಾರದ ಕ್ರಮ ವಿರೋಧಿಸಿ ಎನ್‌ಜಿಒ ಹಾಗೂ ಶಿಕ್ಷಕರ ಸಂಘದ ಪ್ರತಿನಿಧಿಗಳು ಶನಿವಾರ ಸಂಜೆ 5:30ರ ನಂತರ ಡಿಡಿಪಿಐ ಕಚೇರಿ ಎದುರು ಸಾಂಕೇತಿಕವಾಗಿ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.
ಡಿಡಿಪಿಐ ಎನ್.ಜಿ.ಬಸವರಾಜು ಅವರು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ವಿವಿಧ ವಿನೂತನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದರು. ಅವರನ್ನು ವಿನಾ ಕಾರಣ ಕರ್ತವ್ಯ ನಿರ್ಲಕ್ಷ್ಯದ ನೆಪದಿಂದ ಅಮಾನತುಪಡಿಸಿರುವುದು ಸರಿಯಲ್ಲ. ತಕ್ಷಣ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದರು.







