ಸಂಘ-ಸಂಸ್ಥೆಗಳು ಬಲಿಷ್ಠಗೊಳ್ಳಲು ಸಮಾಜಮುಖಿ ಚಿಂತನೆ ಅಗತ್ಯ: ಕಿರುಗುಂದ ಅಬ್ಬಾಸ್

ಮೂಡಿಗೆರೆ,ಜ.6: ಸಂಘ-ಸಂಸ್ಥೆಗಳು ಬಲಿಷ್ಠಗೊಂಡಲ್ಲಿ ಸಮಾಜಮುಖಿ ಚಿಂತನೆ ನಡೆಸುವ ಮೂಲಕ ಸರ್ವ ಧರ್ಮದ ಸೇವೆಯಲ್ಲಿ ತೊಡಗಬಹುದೆಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಕಿರುಗುಂದ ಅಬ್ಬಾಸ್ ಅಭಿಪ್ರಾಯಪಟ್ಟರು.
ಅವರು ಶನಿವಾರ ಪಟ್ಟಣದ ಅಜ್‍ಯದ್ ಸಂಸ್ಥೆಯ ಹಜ್ ಹಾಗೂ ಉಮ್ರ ಸೇವಾ ಕಚೇರಿ ಸಭಾಂಗಣದಲ್ಲಿ ನಡೆದ ಮಲೆನಾಡು ಗಲ್ಫ್ ಅಸೋಷಿಯೇಷನ್ ಕೇಂದ್ರೀಯ ಸಮಿತಿ ಸಭೆ ಹಾಗೂ ಫಲಾನುಭವಿಯೊಬ್ಬರಿಗೆ ಧನಸಹಾಯ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮುಸ್ಲಿಂ ಧರ್ಮೀಯ ಬಡವರ್ಗದವರ ಹೆಣ್ಣುಮಕ್ಕಳ ಮದುವೆಗಾಗಿ ಕಷ್ಟಪಡುವ ಪೋಷಕರಿಗೆ ಹಾಗೂ ರೋಗಿಗಳ ಆಸ್ಪತ್ರೆ ಖರ್ಚಿಗೆ ರಕ್ತದಾನ, ರಂಝಾನ್ ತಿಂಗಳ ಉಪವಾಸ ವೇಳೆ ಕಿಟ್ ವಿತರಣೆ ಮತ್ತಿತರ ರೀತಿಯಲ್ಲಿ ಸಹಾಯ ಮಾಡುವ ಸಂಘ-ಸಂಸ್ಥೆಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುತ್ತದೆ. ಆ ನಿಟ್ಟಿನಲ್ಲಿ ತಮ್ಮ ಕುಟುಂಬವನ್ನು ದೂರದ ದೇಶದಲ್ಲಿರಿಸಿ, ಮನೆಯ ಯಜಮಾನ ವಿದೇಶದಲ್ಲಿ ಕಷ್ಟಪಟ್ಟು ದುಡಿದು, ಭಾರತೀಯರಿಗೆ ಸಹಾಯ ಮಾಡುವ ಉದ್ದೇಶ ಹೊಂದಿರುವ ಮಲೆನಾಡು ಗಲ್ಫ್ ಅಸೋಷಿಯೇಷನ್‍ನ ಸೇವಾ ಮನೋಭಾವ ಅಗ್ರಸ್ಥಾನದಲ್ಲಿದೆ ಎಂದು ಕೊಂಡಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಸೋಷಿಯೇಷನ್ ಕೇಂದ್ರೀಯ ಸಮಿತಿ ಅಧ್ಯಕ್ಷ ಅಕ್ರಂ ಹಾಜಿ ಮಾತನಾಡಿ, ಸಾವು ಮತ್ತು ಬದುಕಿನ ಮಧ್ಯೆ ಇರುವ ಕಷ್ಟಜೀವಿಗಳು ನಿರ್ಗತಿಕ ಕುಟುಂಬಗಳಿಗೆ, ಅನಾಥರಿಗೆ, ವಿಕಲಚೇತನರಿಗೆ ಸಹಾಯ ಮಾಡುವ ಮೂಲಕ ನಾವು ಬದುಕಿ, ನಮ್ಮ ಜೊತೆ ಇತರರು ಬದುಕಿ ದಾರಿ ತೋರಿಸಿದರೆ ನಾವು ಸನ್ಮಾರ್ಗದಲ್ಲಿ ಸಾಗಿದ್ದೇವೆ ಎಂದುಕೊಳ್ಳಬಹುದು. ಆ ನಿಟ್ಟಿನಲ್ಲಿ ತಮ್ಮ ಸಂಘಟನೆ ದಿನಂಪ್ರತಿ ಕರ್ತವ್ಯ ನಿರ್ವಹಿಸುತ್ತಿದೆ ಎಂದ ಅವರು, ಮುಂದಿನ ಫೆಬ್ರವರಿ ತಿಂಗಳಲ್ಲಿ ಪಟ್ಟಣದಲ್ಲಿ ಬೃಹತ್ ಸಮಾರಂಭವೊಂದನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಸೋಷಿಯೇಷನ್ ಗೌರವಾಧ್ಯಕ್ಷ ಇಸ್ಮಾಯಿಲ್ ಆಝಾದ್ ಹಾಜಿ, ಮುಖಂಡರಾದ ಹಸನಬ್ಬ ಕೊಟ್ಟಿಗೆಹಾರ, ಇಸ್ಮಾಯಿಲ್ ಬೀಜುವಳ್ಳಿ, ಹಮೀದ್ ಸಬ್ಬೇನಹಳ್ಳಿ, ಇಬ್ರಾಹಿಂ ಸಾಲಿಮಾರ್, ಬಿ.ಎಚ್.ಮಹಮ್ಮದ್, ಸುಲೈಮಾನ್ ಮುಸ್ಲಿಯಾರ್, ಅಹಮ್ಮದ್ ಬಾವ ಬಿಳಗುಳ, ದಾರದಹಳ್ಳಿ ಗ್ರಾಪಂ ಸದಸ್ಯ ಅಬೂಬಕ್ಕರ್ ಮತ್ತಿತರರು ಇದ್ದರು.







