ಮೂರನೇ ಬಾರಿ ಸ್ವಿಟ್ಝರ್ಲೆಂಡ್ ಮಡಿಲಿಗೆ ಹೋಪ್‌ಮನ್ ಕಪ್

ಪರ್ತ್(ಆಸ್ಟ್ರೇಲಿಯ), ಜ.6: ರೋಜರ್ ಫೆಡರರ್ ಹಾಗೂ ಬೆಲಿಂದ ಬೆನ್‌ಸಿಕ್ ನಿರ್ಣಾಯಕ ಮಿಶ್ರ ಡಬಲ್ಸ್ ಪಂದ್ಯವನ್ನು ಜಯಿಸುವುದರೊಂದಿಗೆ ಸ್ವಿಟ್ಝರ್ಲೆಂಡ್ ಟೆನಿಸ್ ತಂಡ ಮೂರನೇ ಬಾರಿ ಹೋಪ್‌ಮನ್ ಕಪ್‌ನ್ನು ತನ್ನದಾಗಿಸಿಕೊಂಡಿದೆ.
ಶನಿವಾರ ನಡೆದ ಪಂದ್ಯದಲ್ಲಿ ಫೆಡರರ್-ಬೆನ್‌ಸಿಕ್ ಜೋಡಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಹಾಗೂ ಏಂಜೆಲಿಕ್ ಕೆರ್ಬರ್‌ರನ್ನು 4-3(3), 4-2 ಸೆಟ್‌ಗಳ ಅಂತರದಿಂದ ಮಣಿಸಿದರು.ಬಾರಿಯ ಚಾಂಪಿಯನ್ ಫೆಡರರ್ 2001ರಲ್ಲಿ ಮಾರ್ಟಿನಾ ಹಿಂಗಿಸ್‌ರೊಂದಿಗೆ ಪ್ರಶಸ್ತಿಯನ್ನು ಜಯಿಸಿದ್ದರು. ಪ್ರಸ್ತುತ ಟೂರ್ನಿಯಲ್ಲಿ ಆಡಿರುವ ಎಲ್ಲ 4 ಸಿಂಗಲ್ಸ್ ಪಂದ್ಯಗಳಲ್ಲಿ ಫೆಡರರ್ ಜಯ ಸಾಧಿಸಿ ಅಜೇಯ ದಾಖಲೆ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯನ್ ಓಪನ್‌ಗೆ ಉತ್ತಮ ತಯಾರಿ ನಡೆಸಿದ್ದಾರೆ.ದಕ್ಕೆ ಮೊದಲು ನಡೆದ ಪುರುಷರ ಸಿಂಗಲ್ಸ್ ನಲ್ಲಿ ರೋಜರ್ ಫೆಡರರ್ ಅವರು ಝ್ವೆರೆವ್‌ರನ್ನು 6-7(4/7), 6-0, 6-2 ಸೆಟ್‌ಗಳ ಅಂತರದಿಂದ ಸೋಲಿಸಿ ಸ್ವಿಸ್ ತಂಡಕ್ಕೆ 1-0 ಅಂತರದಿಂದ ಮೇಲುಗೈ ಒದಗಿಸಿಕೊಟ್ಟರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಜರ್ಮನಿಯ ಕೆರ್ಬರ್ ಸ್ವಿಸ್‌ನ ಬೆನ್‌ಸಿಕ್‌ರನ್ನು 6-4, 6-1 ಅಂತರದಿಂದ ಸೋಲಿಸಿ ಸಮಬಲದ ಹೋರಾಟ ನೀಡಿದರು. ಹೀಗಾಗಿ ಟೂರ್ನಿಯಲ್ಲಿ ಮಿಶ್ರ ಡಬಲ್ಸ್ ಪಂದ್ಯ ನಿರ್ಣಾಯಕ ಎನಿಸಿಕೊಂಡಿತು. ಕೆರ್ಬರ್ ಈ ವರ್ಷದ ಹೋಪ್‌ಮನ್ ಕಪ್‌ನಲ್ಲಿ ಸತತ ನಾಲ್ಕನೇ ಜಯ ಸಾಧಿಸಿದರು.
ಮಿಕ್ಸೆಡ್ ಡಬಲ್ಸ್‌ನಲ್ಲಿ ಸೋತಿರುವ ಜರ್ಮನಿ ಹೋಪ್‌ಮನ್ ಕಪ್‌ನಲ್ಲಿ ತನ್ನ ಕಳಪೆ ಪ್ರದರ್ಶನ ಮುಂದುವರಿಸಿತು. ಜರ್ಮನಿ 1995ರಲ್ಲಿ ಬೊರಿಸ್ ಬೆಕೆರ್ ಹಾಗೂ ಹ್ಯೂಬರ್ ನೇತೃತ್ವದಲ್ಲಿ ಪ್ರಶಸ್ತಿ ಜಯಿಸಿತ್ತು. 1993ರಲ್ಲಿ ಸ್ಟೆಫಿ ಗ್ರಾಫ್ ಹಾಗೂ ಮೈಕಲ್ ಸ್ಟಿಚ್ ಜರ್ಮನಿಗೆ ಮೊದಲ ಬಾರಿ ಹೋಪ್‌ಮನ್ ಕಪ್ ಗೆದ್ದುಕೊಟ್ಟಿದ್ದರು.





