ಪಟಿಯಾಲ ಪೊಲೀಸರಿಂದ ಸರಣಿ ಹಂತಕನ ಬಂಧನ

ಪಟಿಯಾಲ, ಜ. 6: ಪಟಿಯಾಲ ಪೊಲೀಸರು ಶುಕ್ರವಾರ ಓರ್ವ ಸರಣಿ ಹಂತಕನನ್ನು ಬಂಧಿಸಿದ್ದಾರೆ. ಈತ ಕಳೆದ 22 ವರ್ಷಗಳಲ್ಲಿ 7 ಕೊಲೆಗಳನ್ನು ಮಾಡಿರುವುದಾಗಿ ತಪ್ಪೊಪ್ಪಿ ಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಲುಧಿಯಾನ ಜಿಲ್ಲೆಯ ಬಾಡ್ಲೋವಲ್ ಪ್ರದೇಶದ ಜಗರೂಪ್ ಸಿಂಗ್ (47) ಎಂದು ಗುರುತಿಸಲಾಗಿದೆ. ರಿಕ್ಷಾ ಚಾಲಕನಾಗಿರುವ ಜಗರೂಪ್ 2004 ಹಾಗೂ 2011ರಲ್ಲಿ ತನ್ನ ಇಬ್ಬರು ಪ್ರೇಯಸಿಯರ ಪತಿಯನ್ನು ಹತ್ಯೆ ಮಾಡಿದ್ದಾನೆ. 1995ರಲ್ಲಿ ತಾನು ಮೊದಲ ಹತ್ಯೆ ನಡೆಸಿದೆ ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ. ಇದುವರೆಗೆ ಯಾವ ಪ್ರಕರಣದ ವಿಚಾರಣೆಯೂ ಪೂರ್ಣಗೊಂಡಿಲ್ಲ.
ಪಾಟಿಯಾಲದ ಮಾಡೆಲ್ ಪಟ್ಟಣ ಪ್ರದೇಶದಲ್ಲಿ ಡಿಸೆಂಬರ್ 30ರಂದು ನಡೆದ ರಾಜೇಂದ್ರ ಸಿಂಗ್ (43) ಹತ್ಯೆ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಜಗರೂಪ್ ಹೇಮಾಳನ್ನು ಪ್ರೀತಿಸುತ್ತಿದ್ದ. ಆದರೆ, ರಾಜೇಂದ್ರ ಸಿಂಗ್ ಹಾಗೂ ಹೇಮಾ ನಡುವೆ ಅನೈತಿಕ ಸಂಬಂಧ ಇದೆ ಎಂಬ ಸಂಶಯ ಜಗರೂಪ್‌ಗೆ ಇತ್ತು. ಈ ಹಿನ್ನೆಲೆಯಲ್ಲಿ ಜಗರೂಪ್ ರಾಜೇಂದ್ರ ಸಿಂಗ್‌ರನ್ನು ಹತ್ಯೆ ಮಾಡಿದ್ದ ಎಂದು ಪಾಟಿಯಾಲ ವಲಯದ ಡಿಐಜಿ ಸುಖ್‌ಚೈನ್ ಸಿಂಗ್ ಗಿಲ್ ತಿಳಿಸಿದ್ದಾರೆ.
2004ರಲ್ಲಿ ಜಗರೂಪ್ ಹರ್ಯಾಣ ಮೂಲದ ಮಹಿಳೆ ಪ್ರೇಮಜೀತ್ ಕೌರ್‌ರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಹಾಗೂ ಆಕೆಯ ಪತಿ ಕುಲ್‌ದೀಪ್‌ನನ್ನು ಹತ್ಯೆಗೈದಿದ್ದ. ಇದಲ್ಲದೆ ಇನ್ನೂ ಐದು ಕೊಲೆಗಳನ್ನು ಈತ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.