ವಿಶ್ವಚಾಂಪಿಯನ್ ಸಕ್ಷಮ್ ಸೇರಿ ಐವರು ಕ್ರೀಡಾಪಟುಗಳ ಸಾವು
ಭೀಕರ ಕಾರು ಅಪಘಾತ

ಹೊಸದಿಲ್ಲಿ, ಜ. 7: ಅಲಿಪುರ ಪ್ರದೇಶದ ಸಿಂಘು ಗಡಿ ಸಮೀಪ ರವಿವಾರ ಮುಂಜಾನೆ ಸಂಭವಿಸಿದ ಕಾರು ಅಪಘಾತದಲ್ಲಿ ವಿಶ್ವಚಾಂಪಿಯನ್ ಸಕ್ಷಮ್ ಸೇರಿದಂತೆ ಐವರು ಪವರ್ ಲಿಫ್ಟರ್‌ಗಳು ಮೃತಪಟ್ಟಿದ್ದಾರೆ ಹಾಗೂ ಇನ್ನೋರ್ವರು ಗಂಭೀರ ಗಾಯಗೊಂಡಿದ್ದಾರೆ.
ಅಥ್ಲೀಟ್‌ಗಳು ಪಾನಿಪತ್‌ನಲ್ಲಿ ಅಥ್ಲೆಟಿಕ್‌ಮೀಟ್‌ನಲ್ಲಿ ಭಾಗವಹಿಸಿ ಸ್ವಿಫ್ಟ್ ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ನಸುಕಿನ ಸುಮಾರು 4 ಗಂಟೆ ಹೊತ್ತಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಂದು ವಾಹನವನ್ನು ಓವರ್‌ಟೇಕ್ ಮಾಡುವ ಸಂದರ್ಭ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಬವೊಂದಕ್ಕೆ ಢಿಕ್ಕಿ ಹೊಡೆಯಿತು. ಕಾರು ನಿಲುಗಡೆ ಯಾಗುವ ಮೊದಲು ಹಲವು ಬಾರಿ ಪಲ್ಟಿ ಹೊಡೆಯಿತು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ಮೃತಪಟ್ಟವರನ್ನು ಸಕ್ಷಮ್, ಹರೀಶ್, ಟಿಂಕು, ಸೌರಭ್ ಮತ್ತು ಯೋಗೇಶ್ ಎಂದು ಗುರುತಿಸಲಾಗಿದೆ. ಬಾಲಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲ 6 ಅಥ್ಲೀಟ್‌ಗಳನ್ನು ಪಿಸಿಆರ್ ತಂಡ ರಾಜಾ ಹರಿಶ್ಚಂದ್ರ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ನಾಲ್ವರು ಆಸ್ಪತ್ರೆಗೆ ತರುವಾಗಲೇ ಮೃತರಾಗಿದ್ದರು. ಗಂಭೀರ ಗಾಯಗೊಂಡ ಯಾದವ್ ಆಸ್ಪತ್ರೆಯಲ್ಲಿ ನಿಧನರಾದರು. ಬಾಲಿ ಅವರನ್ನು ಶಾಲಿಮಾರ್ ಬಾಗ್‌ನಲ್ಲಿರುವಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.