ಯಾರನ್ನೂ ದ್ವೇಷಿಸದ, ನೋಯಿಸದ ಎಲ್ಲರನ್ನೂ ಧರ್ಮ ಮೀರಿ ಪ್ರೀತಿಸಿದ ವ್ಯಕ್ತಿಯಾತ: ಬಶೀರ್ ಆತ್ಮೀಯ ಗೆಳೆಯ ಪ್ರಭಾಕರ್

ಬಶೀರ್
ಮಂಗಳೂರು, ಜ.7: “ಆತ ಒಳ್ಳೆಯ ವ್ಯಕ್ತಿ. ಯಾರಿಗೂ ಕೆಟ್ಟದ್ದು ಮಾಡಿದವನಲ್ಲ. ಸಹಾಯ ಕೇಳಿ ಬಂದವರಿಗೆ ತನ್ನಿಂದಾದ ನೆರವು ನೀಡಿದಾತ. ಆದರೂ, ಏನೂ ತಪ್ಪು ಮಾಡದೆ ಜೀವನ್ಮರಣದ ನಡುವೆ ಹೋರಾಡಿ ಕೊನೆಗೂ ಆತ ನಮ್ಮೆಲ್ಲರಿಂದ ದೂರವಾದ...”
ಕೋಮುದ್ವೇಷದ ಪ್ರತೀಕಾರಕ್ಕೆ ಬಲಿಯಾಗಿ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಆಕಾಶಭವನದ ಬಶೀರ್ ಬಗ್ಗೆ ಅವರ ಆತ್ಮೀಯ ಮಿತ್ರ ಪ್ರಭಾಕರ ಆಕಾಶಭವನ ಅವರ ದು:ಖದ ಮಾತಿದು.
“ಯಾರೊಂದಿಗೂ ದ್ವೇಷವಿಲ್ಲದ, ಯಾರನ್ನೂ ನೋಯಿಸದ ತಮ್ಮ ನೆರೆಹೊರೆಯವರನ್ನೂ ಧರ್ಮ ಮೀರಿ ಪ್ರೀತಿಸಿದ ವ್ಯಕ್ತಿಯಾತ. ಸಾವು ಬದುಕಿನ ನಡುವೆ ಹೋರಾಡುತ್ತಿರುವಾಗ ಮನೆಯವರು ಮಾತ್ರವಲ್ಲದೆ ಆ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ನೆರೆಹೊರೆಯವರೂ ಪ್ರಾಣ ರಕ್ಷಣೆಗಾಗಿ ಸೃಷ್ಟಿಕರ್ತನಲ್ಲಿ ಪ್ರಾರ್ಥಿಸಿದ್ದರು. ನಗರದ ಆಸ್ಪತ್ರೆಯ ಐಸಿಯುವಿನಲ್ಲಿ ಕಳೆದ ನಾಲ್ಕು ದಿನಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಆತನಿಗಾಗಿ ಕುಟುಂಬವರ್ಗವಂತೂ ಉಪವಾಸವಿದ್ದು, ಧರ್ಮಗ್ರಂಥದ ಪಠಣ ಮಾಡುತ್ತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಆದರೂ ಬಶೀರ್ ಇಹಲೋಕದ ನಂಟನ್ನೇ ಕಳೆದುಕೊಂಡಿದ್ದಾರೆ” ಎಂದು ಪ್ರಭಾಕರ್ ಹೇಳಿದರು.
ಸುಮಾರು 15 ವರ್ಷಗಳ ಕಾಲ ಬಶೀರ್ ಜತೆ ವಿದೇಶದಲ್ಲಿದ್ದ ಪ್ರಭಾಕರ್, ಆಕಾಶಭವನದಲ್ಲೂ ನೆರೆಮನೆಯವರಾಗಿ ಬಶೀರ್ ಹಾಗೂ ಅವರ ಕುಟುಂಬವನ್ನು ಹತ್ತಿರದಿಂದ ಬಲ್ಲವರು.
ಕಾಟಿಪಳ್ಳದಲ್ಲಿ ಜ.3ರಂದು ಹಾಡಹಗಲೇ ದೀಪಕ್ ರಾವ್ ಎಂಬವರನ್ನು ಹಂತಕರು ಹತ್ಯೆ ಗೈದು ಅವರ ಕುಟುಂಬ ಮಾತ್ರವಲ್ಲದೆ ಇಡೀ ಜಿಲ್ಲೆ ದುಃಖಿಸುತ್ತಿದ್ದಾಗ ರಾತ್ರಿ ಬಶೀರ್ ಮೇಲೆ ಕೊಲೆಗಡುಕರು ಪ್ರತೀಕಾರವಾಗಿ ಬರ್ಬರ ದಾಳಿ ನಡೆಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಶೀರ್ ರನ್ನು ಆ್ಯಂಬುಲೆನ್ಸ್ ಚಾಲಕರಾದ ರೋಹಿತ್ ಹಾಗು ಶೇಖರ್ ಆಸ್ಪತ್ರೆಗೆ ತಕ್ಷಣ ದಾಖಲಿಸಿದ್ದರು. ಸುಮಾರು ಮೂರು ದಿನಗಳ ಜೀವನ್ಮರಣದ ಹೋರಾಟದ ನಂತರ ಇಂದು ಬೆಳಗ್ಗೆ ಬಶೀರ್ ಕೊನೆಯುಸಿರೆಳೆದರು.
ತನ್ನ ಆತ್ಮೀಯ ಗೆಳೆಯ ಹಲ್ಲೆಗೊಳಗಾದ ದಿನದಿಂದ ಅವರ ಕುಟುಂಬಕ್ಕೆ ಧೈರ್ಯ ತುಂಬುತ್ತಾ, ಅವರ ಪ್ರಾಣ ರಕ್ಷಣೆಗಾಗಿ ಪ್ರಾರ್ಥಿಸುತ್ತಿದ್ದ ಪ್ರಭಾಕರ್ ಇಂದು ಗೆಳೆಯನನ್ನು ಕಳೆದುಕೊಂಡು ದುಃಖಿತರಾಗಿದ್ದಾರೆ.
“ಅವನು ತುಂಬಾ ಒಳ್ಳೆಯವ. ಯಾರಿಗೂ ಕೇಡುಬಯಸದವ. ಯಾವ ಸಂಘಟನೆಯಲ್ಲೂ ಗುರುತಿಸದವ. ಪರೋಪಕಾರಿಯಾಗಿದ್ದ ಅವನಿಗ್ಯಾಕೆ ಈ ಶಿಕ್ಷೆ. ಅವನ ಕುಟುಂಬವೂ ಅಷ್ಟೇ. ಇಂದು ಬೆಳಗ್ಗೆ ನಾನು ಅವರ ಮನೆಯಲ್ಲೇ ಇದ್ದೆ. ಸುದ್ದಿ ತಿಳಿದು ಆಸ್ಪತ್ರೆ ಗೆ ಬಂದಿದ್ದೇನೆ” ಎಂದು ಪ್ರಭಾಕರ್ ‘ವಾರ್ತಾ ಭಾರತಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.







