ಉತ್ತರ ಪ್ರದೇಶ: ಹಜ್ ಕಚೇರಿಯ ಕಾಂಪೌಂಡ್ ಗೆ ಬಿಳಿ ಬಣ್ಣ
ಕೇಸರಿ ಬಣ್ಣ ಬಳಿದಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ರಮ

ಲಕ್ನೋ, ಜ.7: ಇಲ್ಲಿನ ಹಜ್ ಸಮಿತಿಯ ಕಚೇರಿಯ ಕಾಂಪೌಂಡ್ ಗೆ ಕೇಸರಿ ಬಣ್ಣ ಬಳಿದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಕಾಂಪೌಂಡ್ ಗೆ ಬಿಳಿ ಬಣ್ಣ ಬಳಿಯಲಾಗಿದೆ.
ಇದು ಕಾಂಟ್ರಾಕ್ಟರ್ ನ ಕೃತ್ಯ ಎಂದು ಉತ್ತರ ಪ್ರದೇಶ ಸರಕಾರ ದೂರಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದೆ. “ಘಟನೆಯ ಬಗ್ಗೆ ಉತ್ತರ ಪ್ರದೇಶ ಹಜ್ ಸಮಿತಿಯ ಆರ್,ಪಿ.ಸಿಂಗ್ ತಕ್ಷಣ ಗಮನ ಹರಿಸಿದ್ದಾರೆ” ಎಂದು ಸರಕಾರ ಪ್ರಕಟನೆಯಲ್ಲಿ ತಿಳಿಸಿದೆ. ಲಕ್ನೋದಲ್ಲಿರುವ ಹಜ್ ಕಚೇರಿಯ ಕಾಂಪೌಂಡ್ ಗೆ ಕೇಸರಿ ಬಣ್ಣ ಬಳಿದ ವಿಚಾರ ಭಾರೀ ವಿವಾದ ಸೃಷ್ಟಿಸಿತ್ತು.
“ಹಜ್ ಕಚೇರಿಗೆ ಕೇಸರಿ ಬಣ್ಣ ಬಳಿದಿರುವ ವಿಚಾರ ನಿಜಕ್ಕೂ ಖಂಡನೀಯ. ರಾಜಕೀಯ ಉದ್ದೇಶಗಳಿಗಾಗಿ ಕೇಸರಿ ಬಣ್ಣವನ್ನು ಬಳಸಲಾಗುತ್ತಿದೆ. ಹಜ್ ಯಾತ್ರಾರ್ಥಿಗಳೂ ಕೇಸರಿ ಬಟ್ಟೆ ಧರಿಸಬೇಕು ಎಂದು ಅವರು ಬಯಸುತ್ತಾರೆಯೇ?” ಎಂದು ಧಾರ್ಮಿಕ ಮುಖಂಡ ಶಹರ್ ಖಾಝಿ ಮೌಲಾನ ಅಬ್ದುಲ್ ಇರ್ಫಾನ್ ಪ್ರಶ್ನಿಸಿದ್ದಾರೆ. ಬಿಜೆಪಿಯು ಕೇಸರೀಕರಣಕ್ಕೆ ಮುಂದಾಗಿದೆ ಎಂದು ಎಸ್ ಪಿ ಆರೋಪಿಸಿತ್ತು.
Next Story