ಹಿಂದೂ, ಕ್ರೈಸ್ತ ಹಾಗು ಇತರ ಧರ್ಮದ ನನ್ನ ಸಹೋದರ ಸಹೋದರಿಯರಿಗೆ ಅನ್ಯಾಯವಾಗಬಾರದು
ಹತ ಬಶೀರ್ ಸಹೋದರ ಹಕೀಂ ಮನವಿ

ಬಶೀರ್
ಮಂಗಳೂರು, ಜ.7: ಕೊಟ್ಟಾರಚೌಕಿಯಲ್ಲಿ ದುಷ್ಕರ್ಮಿಗಳ ದಾಳಿಗೊಳಗಾಗಿ ಜೀವನ್ಮರಣ ಹೋರಾಟದ ನಂತರ ರವಿವಾರ ಬೆಳಗ್ಗೆ ಬಶೀರ್ ಮೃತಪಟ್ಟಿದ್ದಾರೆ. ಬಶೀರ್ ಮೃತದೇಹವನ್ನು ವೀಕ್ಷಿಸಲು ಎ.ಜೆ. ಆಸ್ಪತ್ರೆಯ ಬಳಿ ನೂರಾರು ಜನರು ಜಮಾಯಿಸಿದ್ದು, ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಬಶೀರ್ ಸಹೋದರ ಹಕೀಂ ವಿನಂತಿಸಿದ್ದಾರೆ.
“ನನ್ನ ಅಣ್ಣನಿಗೆ ಅನ್ಯಾಯವಾಗಿದೆ ಎಂದು ಯಾರಿಗೂ ನಮ್ಮಿಂದ ಅನ್ಯಾಯವಾಗಬಾರದು. ಮುಸ್ಲಿಮರಾಗಲೀ, ಹಿಂದೂ ಧರ್ಮದ, ಕ್ರೈಸ್ತ ಧರ್ಮದ ಹಾಗು ಇತರ ಧರ್ಮದ ನನ್ನ ಸಹೋದರ ಸಹೋದರಿಯರಿಗೆ ಯಾವುದೇ ಅನ್ಯಾಯವಾಗಬಾರದು. ಎಲ್ಲರೂ ಶಾಂತಿ, ಸೌಹಾರ್ದತೆ, ಸಹಬಾಳ್ವೆಯಿಂದ ಬದುಕಬೇಕು. ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿ, ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ದಫನ ಮಾಡುವವರೆಗೆ ಹಾಗು ಅದರ ನಂತರವೂ ಯಾರೂ ಶಾಂತಿ ಕದಡಬಾರದು. ನಾವು ಅದಕ್ಕೆ ಆಸ್ಪದ ನೀಡಬಾರದು. ಎಲ್ಲರನ್ನೂ ದೇವರು ಅನುಗ್ರಹಿಸಲಿ. ಎಲ್ಲರೂ ಬಶೀರ್ ಅವರಿಗಾಗಿ ಪ್ರಾರ್ಥಿಸಿ” ಎಂದು ಹಕೀಂ ಮನವಿ ಮಾಡಿದರು.
ಕೊಲೆಗೆ ಇನ್ನೊಂದು ಕೊಲೆಯೇ ಉತ್ತರ ಎನ್ನುವ ಮನಸ್ಥಿತಿಯ ಯುವಕರ ನಡುವೆ, ತನ್ನ ಸಹೋದರ ಅನ್ಯಾಯವಾಗಿ ಮೃತಪಟ್ಟರೂ, ದುಃಖದ ನಡುವೆಯೂ ಸರ್ವಧರ್ಮೀಯರ ಒಳಿತು ಮತ್ತು ನಾಡಿನ ಶಾಂತಿ ಕಾಪಾಡಲು ಮನವಿ ಮಾಡಿದ ಹಕೀಂರ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.





