ಮಾನವ-ಪ್ರಾಣಿ ಸಂಘರ್ಷ ತಡೆಯುವಲ್ಲಿ ಅರಣ್ಯ ಸಿಬ್ಬಂದಿ ಪಾತ್ರ ಮುಖ್ಯ: ಅಜಯಗಿರಿ

ಉಡುಪಿ, ಜ.7: ಮಾನವ ಮತ್ತು ಪ್ರಾಣಿಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ತಡೆಯುವಲ್ಲಿ ಅರಣ್ಯ ಸಿಬ್ಬಂದಿಗಳ ಪಾತ್ರ ಪ್ರಮುಖವಾಗಿದೆ ಎಂದು ಆಗುಂಬೆ ಮಲೆಕಾಡು ಸಂಶೋಧನ ಕೇಂದ್ರದ ಸಂಶೋಧಕ ಅಜಯಗಿರಿ ಹೇಳಿದ್ದಾರೆ.
ಉಡುಪಿ ಕಿದಿಯೂರು ಹೊಟೇಲಿನ ಶೇಷಶಯನ ಹಾಲ್‌ನಲ್ಲಿ ರವಿವಾರ ಆಯೋಜಿಸಲಾದ ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ ಉಡುಪಿ ಜಿಲ್ಲೆ ಇದರ 18ನೆ ವರ್ಷದ ವಾರ್ಷಿಕ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.
ಮಾನವ -ಪ್ರಾಣಿ ಸಂಘರ್ಷವನ್ನು ತಡೆಯಲು ಇಲಾಖೆಯ ತಳಮಟ್ಟದ ಸಿಬ್ಬಂದಿ ಒಂದೇ ಸ್ಥಳದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ದಿನಗಟ್ಟಲೆ ಶ್ರಮ ವಹಿಸುತ್ತಾರೆ. ಅರಣ್ಯ ಸಂರಕ್ಷಣೆಯಲ್ಲಿ ಇವರ ಪಾತ್ರ ಸಾಕಷ್ಟು ಮುಖ್ಯ ವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಸಮಾರಂಭವನ್ನು ಮೂಡಬಿದಿರೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಸುಬ್ರಹ್ಮಣ್ಯ ಎಚ್.ಆರ್. ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಮುಡೂರ ಕೊಠಾರಿ ಕೆ. ವಹಿಸಿದ್ದರು. ಮುಖ್ಯ ಅತಿಥಿಯಾಗಿ ರಾಜ್ಯ ವಲಯ ಅರಣ್ಯ ಅಧಿಕಾರಿಗಳ ಸಂಘದ ಅಧ್ಯಕ್ಷ ಜಿ.ಡಿ.ದಿನೇಶ್ ನೂತನ ವರ್ಷದ ದಿನಚರಿಯನ್ನು ಬಿಡುಗಡೆಗೊಳಿಸಿದರು.
ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಲಾಗಿದ್ದ ಅಂತರ್‌ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಮೇಘ ಯು.ಬಂಗೇರ ಹಾಗೂ ಸುನೀಲ್ ಪಿ. ಮತ್ತು ಚಿತ್ರಕಲಾವಿದೆ ರೈಝಾ ಅವರನ್ನು ಸನ್ಮಾನಿಸ ಲಾಯಿತು. ನಿವೃತ್ತ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ಎನ್. ಮತ್ತು ಪದೋನ್ನತಿ ಹೊಂದಿ ಉಪವಲಯ ಅರಣ್ಯಾಧಿಕಾರಿಗಳಾದ ಬಿರ್ತಿರಾಜ್, ನರಸಿಂಗ ಕಾಂಬಳೆ ಅವರನ್ನು ಗೌರವಿಸಲಾಯಿತು.
ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಸಾಲುಮರದ ತಿಮ್ಮಕ್ಕ ಫೌಂಡೇಶನ್‌ನ ಗೌರವ ಟ್ರಸ್ಟಿ ಸಿ.ಪಿ.ಯೋಗೇಶ್ವರ್, ಫಾರೆಸ್ಟ್ ರಿಪೋರ್ಟರ್ ಪತ್ರಿಕೆಯ ಸಂಪಾದಕ ರವೀಂದ್ರ, ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್, ಲಯನ್ಸ್ ಜಿಲ್ಲಾ ಸಂಯೋಜಕ ಎನ್. ಎಂ.ಹೆಗ್ಡೆ ಉಪಸ್ಥಿತರಿದ್ದರು.
ಸಂಘದ ಜಿಲ್ಲಾ ಗೌರವಾಧ್ಯಕ್ಷ ಪ್ರಕಾಶ್‌ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಉಪಾಧ್ಯಕ್ಷ ನಾಗೇಶ ಬಿಲ್ಲವ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್ ಬಿ.ವಿ. ವಂದಿಸಿದರು. ಪ್ರಶಾಂತ್ ಹಾಂಜೆ ಕಾರ್ಯ ಕ್ರಮ ನಿರೂಪಿಸಿದರು.







