ಪಿಎಫ್ಐ ಬಂಟ್ವಾಳ: ಜನಾರೋಗ್ಯವೇ ರಾಷ್ಟ್ರ ಶಕ್ತಿ ಅಭಿಯಾನ

ಫರಂಗಿಪೇಟೆ, ಜ. 7: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ಘಟಕದ ವತಿಯಿಂದ "ಜನಾರೋಗ್ಯವೇ ರಾಷ್ಟ್ರ ಶಕ್ತಿ ಅಭಿಯಾನದ ಅಂಗವಾಗಿ ತಾಲೂಕಿನ ಆಲಡ್ಕ ಮೈದಾನದಲ್ಲಿ ಮ್ಯಾರಾಥಾನ್ ರ್ಯಲಿ ರವಿವಾರ ಬೆಳಗ್ಗೆ ನಡೆಯಿತು.
ಪಿಎಫ್ಐ ಬಿ.ಸಿ.ರೋಡ್ ವಲಯಾಧ್ಯಕ್ಷ ಇಮ್ತಿಯಾಝ್ ತುಂಬೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ನಾವು ಕೆಲಸದ ಮೇಲಿನ ಒತ್ತಡದಿಂದ ಆರೋಗ್ಯದ ಕಡೆ ಗಮನಹರಿಸುತ್ತಿರುವುದು ಕಡಿಮೆಯಾಗಿದೆ. ಇದಕ್ಕೆ ಅಸಮತೋಲನದ ಆಹಾರವೂ ಕಾರಣ. ಇದರಿಂದ ದೈನಂದಿನ ಆಧುನಿಕ ತಂತ್ರಜ್ಞಾನದ ಬೆಳವಣಿಗೆಯೂ ನಮ್ಮ ಮೇಲೆ ನೇರ ಪರಿಣಾಮ ಬೀರಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕಿಂತ ಅನಾರೋಗ್ಯದ ಜನರೇ ಹೆಚ್ಚು. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದನ್ನು ಬಂಡವಾಳವಾಗಿಸಿಕೊಂಡು ಪ್ರತಿಯೊಂದು ಗಲ್ಲಿ ಹಳ್ಳಿಗಳಲ್ಲಿ ಆಸ್ಪತ್ರೆಗಳು ತಲೆಯೆತ್ತಿ ನಿಂತಿವೆ ಎಂದರು. ಪಿಎಫ್ಐ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿಎಫ್ಐ ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಸಲೀಮ್ ಕುಂಪನಮಜಲ್, ಎಸ್ಡಿಪಿಐ ಬಂಟ್ವಾಳ ಕ್ಷೇತ್ರ ಅಧ್ಯಕ್ಷ ಶಾಹುಲ್ ಎಸ್.ಎಚ್, ಎಸ್ಡಿಎಯು ಜಿಲ್ಲಾ ಸಹ ಸಂಚಾಲಕ ಯೂಸುಫ್ ಆಲಡ್ಕ, ಪುರಸಭಾ ಸದಸ್ಯ ಮುನೀಶ್ ಅಲಿ, ಯೂಸುಫ್ ಆಲಡ್ಕ ಉಪಸ್ಥಿತರಿದ್ದರು. ರಹಿಮಾನ್ ಮಠ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಪಾಣೆಮಂಗಳೂರು ಹಳೆ ಸೇತುವೆ ಬಳಿಯಿಂದ ಆಲಡ್ಕ ಮೈದಾನದವರೆಗೆ ಮ್ಯಾರಥಾನ್ ರ್ಯಾಲಿ ನಡೆಯಿತು.







