ಸಿದ್ದರಾಮಯ್ಯ ‘ಹಿಂದೂ’ ಎಂದು ಹೇಳಿಕೊಳ್ಳಲು ಅನರ್ಹ: ಆದಿತ್ಯನಾಥ್

ಬೆಂಗಳೂರು, ಜ.7: ಹಿಂದುತ್ವ ಎನ್ನುವುದು ಜಾತಿಯಲ್ಲ, ಅದೊಂದು ಅತ್ಯುತ್ತಮವಾದ ಜೀವನ ಪದ್ಧತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ‘ನಾನೂ ಹಿಂದೂ’ ಎಂದು ಹೇಳಿಕೊಂಡಿದ್ದಾರೆ. ಹಿಂದೂ ಎಂದು ಗೋಮಾಂಸ ಸೇವಿಸುವುದಿಲ್ಲ. ಗೋಹತ್ಯೆ ನಿಷೇಧಿಸಿ ಬಿಜೆಪಿ ಸರಕಾರ ತಂದಿದ್ದ ಮಸೂದೆಯನ್ನು ಹಿಂದೂ ಎಂದು ಹೇಳಿಕೊಂಡು ತಿರುಗಾಡುವ ಸಿದ್ದರಾಮಯ್ಯ ವಾಪಸ್ ಪಡೆದಿದ್ದೇಕೆ?’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ.
ರವಿವಾರ ವಿಜಯನಗರದ ಬಿಜಿಎಸ್ ಕ್ರೀಡಾಂಗಣದಲ್ಲಿ ಬಿಜೆಪಿ ಆಯೋಜಿಸಿದ್ದ ಪರಿವರ್ತನಾ ಯಾತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಗೋಹತ್ಯೆ ನಿಷೇಧ ಮಸೂದೆಯನ್ನು ವಾಪಸ್ ಪಡೆದು ಹಿಂದೂಗಳಿಗೆ ಅನ್ಯಾಯ ಮಾಡಿದ್ದಾರೆ. ಸಿದ್ದರಾಮಯ್ಯಗೆ ಹಿಂದೂ ಎಂದು ಹೇಳಿಕೊಂಡು ತಿರುಗಾಡುವ ಯಾವುದೆ ಅರ್ಹತೆ ಇಲ್ಲ ಎಂದರು.
ಕರ್ನಾಟಕದ ಕರಾವಳಿ ಭಾಗದಲ್ಲಿ ಸಂಘ ಪರಿವಾರದವರ ಹತ್ಯೆ, ಹಲ್ಲೆಗಳು ನಡೆಯುತ್ತಿದ್ದರೂ ಸಿದ್ದರಾಮಯ್ಯ ನೇತೃತ್ವದ ಸರಕಾರವು ಯಾವುದೇ ಆರೋಪಿಗಳನ್ನು ಬಂಧಿಸುತ್ತಿಲ್ಲ. ಇಂತಹ ಘಟನೆಗಳಿಂದ ಬೇಸತ್ತಿರುವ ರಾಜ್ಯದ ಜನರು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಲಿದ್ದಾರೆಂದು ಆಶಾಭಾವನೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರಕಾರದ ಕಾರ್ಯಕ್ರಮಗಳು ತಾತ್ಕಾಲಿಕ ಕಾರ್ಯಕ್ರಮಗಳಾದರೆ ಬಿಜೆಪಿ ಸರಕಾರದ ಕಾರ್ಯಕ್ರಮಗಳು ಶಾಶ್ವತ ಕಾರ್ಯಕ್ರಮಗಳಾಗಿವೆ. ಹೀಗಾಗಿ, ರಾಜ್ಯದ ಜನರು ತಾತ್ಕಾಲಿಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಕಾಂಗ್ರೆಸ್ ಸರಕಾರವನ್ನು ತಿರಸ್ಕರಿಸಿ ಬಿಜೆಪಿಗೆ ಬೆಂಬಲ ನೀಡಿ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತನಾಡಿ, ಮೂರು ಲಕ್ಷ ಬಾಂಗ್ಲಾ ವಲಸಿಗರು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದು, ಅವರನ್ನು ಮತದಾರರ ಪಟ್ಟಿಗೆ ಸೇರಿಸುವ ಕೆಲಸವನ್ನು ಸಚಿವ ಕೆ.ಜೆ.ಜಾರ್ಜ್, ಶಾಸಕ ಭೈರತಿ ಬಸವರಾಜ್‌ಗೆ ವಹಿಸಲಾಗಿದೆ. ಮತದಾರರ ಪಟ್ಟಿಗೆ ನಕಲಿ ಹೆಸರು ಸೇರಿಸುತ್ತಿರುವ ಕೆಲಸದ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಸಾಧನಾ ಸಮಾವೇಶದ ನೆಪದಲ್ಲಿ ಜಾತಿಯ ವಿಷ ಬೀಜವನ್ನು ಬಿತ್ತುತ್ತಿದ್ದು, ಇದರಿಂದ, ರಾಜ್ಯದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಆಪಾದಿಸಿದರು.
ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಪ್ರಧಾನಿ ಮೋದಿ ಟಾಪ್ ಗೇರ್, ಮನಮೋಹನ ಸಿಂಗ್ ನ್ಯೂಟ್ರಲ್ ಗೇರ್, ಸಿದ್ದರಾಮಯ್ಯ ರಿವರ್ಸ್ ಗೇರ್. ಹೀಗಾಗಿ ರಾಜ್ಯದ ಅಭಿವೃದ್ಧಿ ಹಿಂದಕ್ಕೆ ಹೋಗಿದೆ. ನಿಮಗೆ ರಿವರ್ಸ್ ಗೇರ್ ವ್ಯಕ್ತಿ ಬೇಕಾ, ಟಾಪ್ ಗೇರ್ ವ್ಯಕ್ತಿ ಯಡಿಯೂರಪ್ಪಬೇಕಾ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಆರೆಸ್ಸೆಸ್ಸ್ ಒಂದು ದೇಶಭಕ್ತಿ ಸಂಘಟನೆ. ದೇಶದ ಸಂಸ್ಕೃತಿ, ಭಾಷೆ, ಆಚಾರ, ವಿಚಾರ ಸಂಪ್ರದಾಯಗಳನ್ನು ಪಾಲನೆ ಮಾಡುವುದು ಆರೆಸ್ಸೆಸ್ಸ್ ಧ್ಯೇಯೋದ್ದೇಶ. ಇಂತಹ ಸಂಘಟನೆಗೆ ನಿಷೇಧ ಹೇರಿದರೆ ದೇಶಭಕ್ತರು ಬೀದಿಗಿಳಿಯಲಿದ್ದಾರೆ ಎಂದು ಹೇಳಿದರು.
ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ತೊಡಗಿದ್ದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಸಿಲಿಕಾನ್ ಸಿಟಿ ಇಂದು ರೇಪ್ ಸಿಟಿಯಾಗಿದೆ ಎಂದು ಟೀಕಿಸಿದರು. ಮುಖ್ಯಮಂತ್ರಿ ಮತ್ತು ಗೃಹ ಸಚಿವರ ನಡುವೆ ಹೊಂದಾಣಿಕೆ ಇಲ್ಲದಿರುವ ಕಾರಣ ಪೊಲೀಸರು ಯಾರೊಬ್ಬರ ಮಾತು ಕೇಳುತ್ತಿಲ್ಲ. ರೌಡಿಗಳು, ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸಲು ಸರಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಕಾಶ್ ಜಾವಡೇಕರ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಪಿ.ಸಿ.ಮೋಹನ್, ಮಾಜಿ ಸಚಿವ ಸಿ.ಟಿ.ರವಿ, ಶಾಸಕರಾದ ಡಾ.ಅಶ್ವತ್ಥನಾರಾಯಣ, ಮುನಿರಾಜು, ಸೋವಣ್ಣ ಮತ್ತಿತರರು ಉಪಸ್ಥಿತರಿದ್ದರು.







