ಸಂತ ಸೆಬೆಸ್ಟಿಯನ್ ಚರ್ಚ್ ಶತಮಾನೋತ್ಸವ: ತೊಕ್ಕೊಟ್ಟುವಿನಲ್ಲಿ ಮ್ಯಾರಾಥಾನ್

ಉಳ್ಳಾಲ, ಜ. 7: ಆಡಂಕುದ್ರುವಿನಿಂದ ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್ ತನಕ ಶಾಂತಿ ಹಾಗೂ ಸೌಹಾರ್ದಕ್ಕೆ ಪ್ರತೀಕವಾಗಿ ನಡೆದ ಮ್ಯಾರಾಥಾನ್ ನಲ್ಲಿ ಸಾವಿರಕ್ಕೂ ಮಿಕ್ಕಿದ ಮಂದಿ ಪಾಲ್ಗೊಂಡಿದ್ದು, ಶಾಂತಿ ಹಾಗೂ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಿದೆ ಎಂದು ವಂದನೀಯ ಧರ್ಮಗುರು ಡಾ.ಜೆ.ಬಿ. ಸಲ್ದಾನ ಹೇಳಿದರು.
ಪೆರ್ಮನ್ನೂರಿನ ಸಂತ ಸೆಬೆಸ್ಟಿಯನ್ ಚರ್ಚ್ ನ ಶತಮಾನೋತ್ಸವ ಪ್ರಯುಕ್ತ ನಡೆದ ಮ್ಯಾರಥಾನ್ ಸಮಾರೋಪದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಸಂತ ಸೆಬೆಸ್ಟಿಯನ್ ಚರ್ಚ್ ವತಿಯಿಂದ ಶತಮಾನೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಜನವರಿಯಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನಕ್ಕೆ ಎಲ್ಲರ ಪ್ರೋತ್ಸಾಹ ಸಿಗಬೇಕು. ಉಳ್ಳಾಲದಲ್ಲಿ ಶಾಂತಿ ಸಾಮರಸ್ಯ ಸದಾ ಇರಲಿ ಎಂದು ಆಶಿಸಿದರು.
ಶತಮಾನೋತ್ಸವ ವಿವಿಧ ಕಾರ್ಯಕ್ರಮಗಳ ಮೂಲಕ ಯಶಸ್ವಿಯಾಗಲಿ. ಮ್ಯಾರಾಥಾನ್ ಮಾದರಿ ಕಾರ್ಯಕ್ರಮವಾಗಿದ್ದು ಉಳ್ಳಾಲದಲ್ಲಿ ಸದಾ ಕಾಲ ಸೌಹಾರ್ದತೆ ನೆಲೆಸಲಿ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದರು.
ಸಮಾರೋಪದಲ್ಲಿ ಉಳ್ಳಾಲ ನಗರ ಸಭೆಯ ಪೌರಾಯುಕ್ತೆ ವಾಣಿ ವಿ. ಆಳ್ವ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಅಂತಾರಾಷ್ಟೀಯ ಕ್ರೀಡಾಪಟು ರೋಶನ್ ಫೆರಾವೊ, ಶತಮಾನೋತ್ಸವ ಸಮಿತಿ ಪ್ರಧಾನ ಸಂಚಾಲಕ ಸುರೇಶ ಭಟ್ನಗರ, ಸಹಾಯಕ ಧರ್ಮಗುರು ಫಾ. ಸ್ಟ್ಯಾನಿ, ಫಾ. ಲೈಝಿಲ್, ನಗರಸಭೆಯ ಸದಸ್ಯೆ ರಝಿಯಾ ಇಬ್ರಾಹಿಂ, ಉಪಾಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಸದಸ್ಯ ಸುಂದರ್ ಉಳಿಂಬಾಜಿಲ್ ಡಿಸೋಜ, ಉಳ್ಳಾಲ ಪುರಸಭೆಯ ಸಭೆಯ ಮಾಜಿ ಸದಸ್ಯ ಭಗವಾನ್‌ದಾಸ್, ಪೊಸಕುರಲ್‌ನ ಆಡಳಿತ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಹಾಗೂ ಮ್ಯಾರಾಥಾನ್‌ಗೆ ಸಹಕರಿಸಿದ ವಿವಿಧ ಶಾಲ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.
ಸಂತ ಸೆಬೆಸ್ಟಿಯನ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅರುಣ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.







