ಬಿಜೆಪಿಯ ಪರಿವರ್ತನಾ ಸಮಾವೇಶಕ್ಕೆ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಗೈರು!
ಆಸನವಿಲ್ಲದೆ ಸಿಡಿಮಿಡಿಗೊಂಡು ನಿರ್ಗಮಿಸಿದ ಬಿಜೆಪಿ ನಾಯಕ ರಾಮಚಂದ್ರೇಗೌಡ

ಮುರಳೀಧರ್ ರಾವ್
ಬೆಂಗಳೂರು, ಜ. 7: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ‘ಪರಿವರ್ತನಾ ಯಾತ್ರೆ’ ಪಕ್ಷದ ಮುಖಂಡರಲ್ಲೆ ಅಸಮಾಧಾನ, ಆಂತರಿಕ ಭಿನ್ನಮತಕ್ಕೆ ಸಾಕ್ಷಿಯಾಗಿದೆ. ಯುಪಿ ಸಿಎಂ ಆದಿತ್ಯನಾಥ್ ಪಾಲ್ಗೊಂಡ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಗೈರು ಹಾಜರಾಗಿದ್ದಾರೆ.
ಈ ಮಧ್ಯೆ ವೇದಿಕೆಯಲ್ಲಿ ತನಗೆ ಆಸನ ಹಾಕದಿರುವುದಕ್ಕೆ ಸಿಡಿಮಿಡಿಗೊಂಡ ವಿಧಾನ ಪರಿಷತ್ ಸದಸ್ಯ, ಹಿರಿಯ ಮುಖಂಡ ರಾಮಚಂದ್ರೇಗೌಡ ವೇದಿಕೆಯಿಂದಲೇ ನಿರ್ಗಮಿಸಿದ ಘಟನೆ ನಡೆದಿದೆ. ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ವೇದಿಕೆಯಲ್ಲಿ ಕೆಲ ಗಣ್ಯರಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಆದಿತ್ಯನಾಥ್, ಯಡಿಯೂರಪ್ಪ, ಅನಂತಕುಮಾರ್, ಡಿ.ವಿ. ಸದಾನಂದಗೌಡ, ಪಿಯೂಷ್ ಗೋಯಲ್, ಅಶೋಕ್, ಸೋಮಣ್ಣ ಸೇರಿದಂತೆ ಆಯ್ದ ಗಣ್ಯರಿಗೆ ಮಾತ್ರ ವೇದಿಕೆಯಲ್ಲಿ ಆಸನ ಹಾಕಲಾಗಿತ್ತು. ಆದರೆ, ಇದನ್ನು ತಿಳಿಯದ ರಾಮಚಂದ್ರಗೌಡರು ವೇದಿಕೆಗೆ ಬರುತ್ತಿದ್ದಂತೆ ನೇರವಾಗಿ ಆಸೀನರಾಗಲು ಮುಂದಾದರು. ಅವರಿಗೆ ಅಲ್ಲಿ ಸೀಟು ಕಾಯ್ದಿರಿಸಿರಲಿಲ್ಲ. ಇದರಿಂದ ಕುಪಿತಗೊಂಡ ರಾಮಚಂದ್ರಗೌಡರು ವೇದಿಕೆಯಿಂದ ನಿರ್ಗಮಿಸಿದ್ದರು.
ತಕ್ಷಣವೇ ಮಾಜಿ ಸಚಿವ, ಕಾರ್ಯಕ್ರಮದ ಉಸ್ತುವಾರಿ ವಿ.ಸೋಮಣ್ಣ, ರಾಮಚಂದ್ರಗೌಡರ ಮನವೊಲಿಸಲು ಪ್ರಯತ್ನಿಸಿದರು. ಅಚಾತುರ್ಯದಿಂದ ಹೀಗಾಗಿದೆ, ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ, ವೇದಿಕೆಗೆ ಬನ್ನಿ ಎಂದು ಮನವಿ ಮಾಡಿದರು. ಇದಕ್ಕೆ ಸೊಪ್ಪು ಹಾಕದ ರಾಮಚಂದ್ರಗೌಡ ಅಸಮಾಧಾನಗೊಂಡು ವೇದಿಕೆಯಿಂದ ನಿರ್ಗಮಿಸಿದರು.







