ಗೋಪಾಲಕೃಷ್ಣ ಅಡಿಗರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬೇಕಿತ್ತು: ಜಿ.ಎಸ್.ಸಿದ್ಧಲಿಂಗಯ್ಯ
ಬೆಂಗಳೂರು, ಜ.7: ಕಾವ್ಯ ಪರಂಪರೆಗೆ ಹೊಸ ಧಿಕ್ಕನ್ನು ನೀಡಿದ ಹಿರಿಯ ಕವಿ ಗೋಪಾಲಕೃಷ್ಣ ಅಡಿಗರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬೇಕಾಗಿತ್ತು ಎಂದು ಹಿರಿಯ ಸಾಹಿತಿ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ಅಭಿಪ್ರಾಯಿಸಿದರು.
ರವಿವಾರ ಕೇಂದ್ರ ಸಾಹಿತ್ಯ ಅಕಾಡೆಮಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮುನ್ನೋಟಗಳನ್ನು ನೀಡಿದ ಪು.ತಿ.ನರಸಿಂಹಚಾರ್, ಅಡಿಗರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿಲ್ಲ. ಆದರೂ ಅವರ ಸಾಹಿತ್ಯದ ವಿಚಾರಧಾರೆಗಳು ನದಿಯಂತೆ ಜೀವಂತವಾಗಿದೆ ಯುವ ತಲೆಮಾರುಗಳಿಗೆ ತಲುಪುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಧುನಿಕ ಕತೆ, ಕಾವ್ಯ, ಕಾದಂಬರಿಗಳಲ್ಲಿ ಅಭಿವ್ಯಕ್ತಿಯಾಗಲೇಬೇಕಾದ ಮೂಲಸೆಲೆಯನ್ನು ಅಡಿಗರು ಯುವಸಾಹಿತಿಗಳಿಗೆ ಪರಿಚಯಿಸಿಕೊಟ್ಟಿದ್ದರು. ಮುಖ್ಯವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ, ಪಿ.ಲಂಕೇಶ್ ಸೇರಿದಂತೆ ಅನೇಕ ಮಂದಿ ಯುವ ಸಾಹಿತಿಗಳು ಅಡಿಗರ ಚಿಂತನೆಗಳಿಂದ ಪ್ರೇರಣೆ ಗೊಂಡಿದ್ದರು ಎಂದು ಅವರು ಹೇಳಿದರು.
ಗೋಪಾಲಕೃಷ್ಣ ಅಡಿಗರ ಸ್ವಭಾವವೇ ಅವರನ್ನು ಅತ್ಯುತ್ತಮ ಕಾವ್ಯ ರಚಿಸುವಂತೆ ಸದಾ ಪ್ರೇರೇಪಿಸುತ್ತಿತ್ತು. ಅವರ ಸಾಹಿತ್ಯದಲ್ಲಿ ಶ್ರೇಷ್ಟ ಹಾಗೂ ಅತೃಪ್ತಿ ಅಂಶಗಳೇ ಮುಖ್ಯವಾಗುತ್ತದೆ. ಅವರ ತಲೆಮಾರಿನ ಸಾಹಿತಿಗಳಾದ ಕುವೆಂಪು, ದಾ.ರಾ.ಬೇಂದ್ರೆಯ ಜೊತೆ ಸದಾ ಬೌದ್ಧಿಕವಾದ ಸಂಘರ್ಷಗಳನ್ನು ನಡೆಸುತ್ತಿದ್ದ ಕಾರಣಕ್ಕಾಗಿ ಅತ್ಯುತ್ತಮ ಕಾವ್ಯಗಳನ್ನು ರಚಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಅಡಿಗರು ತನ್ನ ಕವಿತೆಗಳನ್ನು ಸ್ವವಿಮರ್ಶೆಗೆ ಒಡ್ಡುತ್ತಿದ್ದರು. ಅವರು ಬರೆಯುತ್ತಿದ್ದ ಎಲ್ಲ ಕವಿತೆಗಳನ್ನು ಪ್ರಕಟಿಸುತ್ತಿರಲಿಲ್ಲ. ಶ್ರೇಷ್ಟ ಕವಿತೆಗಳನ್ನಷ್ಟೆ ಪ್ರಕಟಿಸಲು ಮುಂದಾಗುತ್ತಿದ್ದರು. ಆಡುಭಾಷೆಯಲ್ಲಿ ಬರೆದಾಗ ಮಾತ್ರ ಕವಿತೆ ಜನಸಾಮಾನ್ಯರ ಹೃದಯಕ್ಕೆ ತಲುಪಿಸಲು ಸಾಧ್ಯವೆಂದು ಅವರು ನಂಬಿದ್ದರು ಎಂದು ಅವರು ಹೇಳಿದರು.
ಹಿರಿಯ ವಿಮರ್ಶಕ ಎಸ್.ಆರ್.ವಿಜಯಶಂಕರ್ ಮಾತನಾಡಿ, ಗೋಪಾಲಕೃಷ್ಣ ಅಡಿಗರು ಪರಂಪರೆಯನ್ನು ವಿಮರ್ಶಿಸಿ ತಮ್ಮ ಕಾವ್ಯಗಳಲ್ಲಿ ಹೊಸ ಚಿಂತನೆಗಳನ್ನು ನೀಡಲು ಪ್ರಯತ್ನಿಸುತ್ತಿದ್ದರು. ಆದರೆ, ಪ್ರಜಾಪ್ರಭುತ್ವ ಮೂಲ ಆಶಯಗಳ ಕುರಿತು ಚಿಂತಿಸುವಲ್ಲಿ ಅವರು ವಿಫಲರಾಗಿದ್ದರು. ಇಂತಹ ದ್ವಂದ್ವಾರ್ಥಗಳು ಅವರ ಸಾಹಿತ್ಯ, ರಾಜಕೀಯ ಚಿಂತನೆಗಳಲ್ಲಿ ಸಾಕಷ್ಟು ಸಿಗಲಿವೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಎಚ್.ಎಸ್.ವೆಂಕಟೇಶ್ ಮೂರ್ತಿ ಮಾತನಾಡಿ, ಯುವ ಲೇಖಕರು ಕಾವ್ಯದ ನೆಲೆಯನ್ನು ಗ್ರಹಿಸಬೇಕು. ತಾವು ರಚಿಸುವ ಯಾವುದೇ ಕವಿತೆಗಳು ಸ್ವಹಿತಾಸಕ್ತಿಯಿಂದ ಕೂಡಿರಬಾರದು ಹಾಗೂ ಪೂರ್ವಾಗ್ರಹ ಪೀಡಿತ ಆಗಿರಬಾರದು ಎಂದು ಆಶಿಸಿದರು.
ಅಡಿಗರು ವಿಮರ್ಷೆ ಮಾಡದೆ ಯಾವುದನ್ನೂ ಒಪ್ಪುತ್ತಿರಲಿಲ್ಲ. ಅಷ್ಟೇ ಅಲ್ಲದೆ ಅವರ ಮಾತು, ನಡವಳಿಗಳು ಸುಲಭವಾಗಿ ಹೊರಬರುತ್ತಿರಲಿಲ್ಲ. ಬೇಂದ್ರೆಯಂತಹ ಮಹಾನ್ ಕವಿಯನ್ನೂ ಕೂಡ ಅವರು ಒಪ್ಪಿರಲಿಲ್ಲ. ಅಷ್ಟೊಂದು ವಿಮರ್ಷಾತ್ಮಕವಾಗಿ ಎಲ್ಲವನ್ನೂ ಅರ್ಥೈಸಿಕೊಂಡು ಮುಂದುವರೆಯುತ್ತಿದ್ದವರು. ಯುವ ಕವಿಗಳೂ ಸಹ ಆ ರೀತಿ ಎಲ್ಲವನ್ನೂ ಕೂಲಂಕುಶವಾಗಿ ವಿಮರ್ಶಿಸಿ ಕಾವ್ಯದ ನೆಲೆಯನ್ನು ಗ್ರಹಿಸಿ ಮುಂದುವರೆಯಬೇಕು ಎಂದು ಅವರು ಹೇಳಿದರು.
ಅಡಿಗರ ಭಾಷೆ, ಕವಿತೆ, ರಾಜಕೀಯ ಚಿಂತನೆ ಯಾವುದೇ ಆದರೂ ಅದಕ್ಕೆ ಅದರದ್ದೇ ಆದ ಮಹತ್ವ ಇತ್ತು. ಅವರು ಯಾವುದನೇ ವಿಷಯದಲ್ಲಿ ಅಂತಿಮ ಸತ್ಯಕ್ಕೆ ಬರುತ್ತಿರಲಿಲ್ಲ. ಕಾವ್ಯವೇ ತನ್ನ ಜೀವಾಳವೆಂಬ ರೀತಿಯಲ್ಲಿ ಬದುಕಿದ್ದರೂ ಕಾವ್ಯವನ್ನು ಹೀಗೆಯೇ ಬರೆಯಬೇಕೆಂದು ಸಿದ್ಧಸೂತ್ರವನ್ನು ಯಾರಿಗೂ ಬೋಧಿಸಿಸದವರಲ್ಲ. ಇಂತಹ ಮಹಾನ್ ಚಿಂತಕನ ಬದುಕು-ಬರಹಗಳನ್ನು ಯುವ ಸಾಹಿತಿಗಳು ಪುನರ್ ಅವಲೋಕನ ಮಾಡಿಕೊಳ್ಳಬೇಕೆಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ತಾರಿಣಿ ಶುಭದಾಯಿನಿ, ಬಸವರಾಜ ಡೋಣೂರು, ಎಚ್.ಎಸ್.ಶಿವಪ್ರಕಾಶ್, ಕೆ.ವೈ.ನಾರಾಯಣಸ್ವಾಮಿ ಮತ್ತಿತರರಿದ್ದರು.







