ಗೋವಾದಲ್ಲಿ ಬೀಫ್ ಕೊರತೆ: ಪೂರೈಕೆಗೆ ಕರ್ನಾಟಕದ ಕಸಾಯಿಖಾನೆಗಳ ನಕಾರ

ಪಣಜಿ,ಜ.7: ಗೋ ರಕ್ಷಕ ಗುಂಪುಗಳಿಂದ ಕಿರುಕುಳವನ್ನು ನಿಲ್ಲಿಸಲು ಸರಕಾರವು ಕ್ರಮಗಳನ್ನು ಕೈಗೊಳ್ಳುವವರೆಗೆ ಗೋಮಾಂಸವನ್ನು ಪೂರೈಸಲು ಕನಾಟಕ ಕಸಾಯಿಖಾನೆಗಳು ನಿರಾಕರಿಸಿರುವುದರಿಂದ ರಾಜ್ಯವು ಮುಂದಿನ ಎರಡು ದಿನಗಳ ಕಾಲ ಬೀಫ್ ಕೊರತೆಯನ್ನು ಎದುರಿಸಬೇಕಿದೆ ಎಂದು ಅಧಿಕಾರಿಯೋರ್ವರು ರವಿವಾರ ಇಲ್ಲಿ ತಿಳಿಸಿದರು.
ಬೆಳಗಾವಿಯಿಂದ ಬೀಫ್ ಖರೀದಿಸುವುದನ್ನು ತನ್ನ ಸದಸ್ಯರು ನಿಲ್ಲಿಸಿರುವುದಾಗಿ ಅಖಿಲ ಗೋವಾ ಕುರೇಶಿ ಮಾಂಸ ವ್ಯಾಪಾರಿಗಳ ಸಂಘವು ಹೇಳಿದೆ.
ಗೋರಕ್ಷಕರಿಂದ ಕಿರುಕುಳದ ಬಗ್ಗೆ ಪೊಲೀಸರೊಂದಿಗೆ ಚರ್ಚಿಸುವುದಾಗಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರು ಶನಿವಾರ ಸಂಘಕ್ಕೆ ಭರವಸೆ ನೀಡಿದ್ದರು. ಆದರೆ ಸದ್ಯ ಅವರು ರಾಜ್ಯದಿಂದ ಹೊರಗಿದ್ದು, ಎರಡು ದಿನಗಳ ಬಳಿಕವಷ್ಟೇ ಮರಳುವ ನಿರೀಕ್ಷೆಯಿದೆ ಎಂದು ಸಂಘದ ಅಧ್ಯಕ್ಷ ಮನ್ನಾ ಬೇಪಾರಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ತಥಾಕಥಿತ ಗೋರಕ್ಷಕರ ವಿರುದ್ಧ ಕ್ರಮಗಳನ್ನು ಕೈಗೊಳ್ಳುವವರೆಗೆ ಬೀಫ್ ಪೂರೈಕೆ ಯನ್ನು ಪುನರಾರಂಭಿಸುವುದಿಲ್ಲ ಎಂದು ಕರ್ನಾಟಕದ ಸರಬರಾಜುದಾರರು ಸ್ಪಷ್ಟವಾಗಿ ತಿಳಿಸಿದ್ದಾರೆ. ಬೆಳಗಾವಿಯಿಂದ ಪ್ರತಿದಿನ ಸುಮಾರು 25 ಟನ್ ಬೀಫ್ ತರಿಸಲಾಗುತ್ತದೆ ಎಂದರು.
ಮುಖ್ಯಮಂತ್ರಿಗಳು ರಾಜ್ಯಕ್ಕೆ ಮರಳಿದ ಬಳಿಕವಷ್ಟೇ ಏನಾದರೂ ಕ್ರಮವನ್ನು ನಿರೀಕ್ಷಿಸಬ ಹುದಾಗಿದೆ. ಹೀಗಾಗಿ ಅಲ್ಲಿಯವರೆಗೆ ಬೀಫ್ ಪೂರೈಕೆ ಆರಂಭಗೊಳ್ಳುವುದಿಲ್ಲ ಎಂದು ಅವರು ತಿಳಿಸಿದರು.
ಗೋವಾಕ್ಕೆ ಕರ್ನಾಟಕದಲ್ಲಿಯ ಅಕ್ರಮ ಕಸಾಯಿಖಾನೆಗಳಿಂದ ಬೀಫ್ ತರಲಾಗುತ್ತಿದೆ ಎಂಬ ಗೋರಕ್ಷಾ ಅಭಿಯಾನ ಸೇರಿದಂತೆ ಗೋರಕ್ಷಕ ಗುಂಪುಗಳ ಆರೋಪವನ್ನು ನಿರಾಕರಿಸಿದ ಬೇಪಾರಿ, ಬೀಫ್ ಅಲಭ್ಯತೆಯಿಂದಾಗಿ ರಾಜ್ಯದಲ್ಲಿ ಮಟನ್ ಮತ್ತು ಚಿಕನ್ ದರಗಳು ಹೆಚ್ಚಿರುವುದನ್ನು ಬೆಟ್ಟು ಮಾಡಿದರು.
ಗಡಿಯಾಚೆಯ ಕಸಾಯಿಖಾನೆಗಳಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ವಧಿಸಲಾಗು ತ್ತಿದೆ ಮತ್ತು ಇದೇ ಕಾರಣದಿಂದ ನಾವು ಪೊಲೀಸರೊಂದಿಗೆ ಸೇರಿಕೊಂಡು ಗೋವಾ-ಕರ್ನಾಟಕದ ಗಡಿಯಲ್ಲಿ ಕಟ್ಟುನಿಟ್ಟಿನ ನಿಗಾ ಇರಿಸಿದ್ದೇವೆ ಎಂದು ಗೋರಕ್ಷಾ ಅಭಿಯಾನದ ನಾಯಕ ಹನುಮಂತ ಪರಬ್ ಹೇಳಿದ್ದಾರೆ.
ಸರಕಾರವು ಈ ವಿಷಯದಲ್ಲಿ ತಕ್ಷಣ ಹಸ್ತಕ್ಷೇಪ ನಡೆಸಬೇಕು. ಅಲ್ಲಿಯವರೆಗೂ ನಾವು ಕರ್ನಾಟಕದಿಂದ ಬೀಫ್ ಖರೀದಿಸುವುದಿಲ್ಲ ಎಂದು ಬೇಪಾರಿ ಸ್ಪಷ್ಟಪಡಿಸಿದರು.
ಗೋವಾಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದಲ್ಲಿ ಗೋಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.