ಲಿಂಗಾಯತ ಪದ ಸೇರ್ಪಡೆ ಇಲ್ಲ : ವಿಶೇಷ ಮಹಾಸಭೆಯಲ್ಲಿ ತೀರ್ಮಾನ
ಬೆಂಗಳೂರು, ಜ.7: ಅಖಿಲ ಭಾರತ ವೀರಶೈವ ಮಹಾಸಭಾ ಹೆಸರನ್ನೇ ಯಥಾವತ್ತಾಗಿ ಉಳಿಸಿಕೊಳ್ಳಲು ಮಹಾಸಭೆಯ ವಿಶೇಷ ಸರ್ವ ಸದಸ್ಯರ ಸಭೆ ತೀರ್ಮಾನಿಸಿದೆ.
ಅಖಿಲ ಭಾರತ ವೀರಶೈವ ಮಹಾಸಭಾ ಹೆಸರಿಗೆ ಲಿಂಗಾಯತ ಪದ ಸೇರ್ಪಡೆ ಮಾಡಬೇಕೆಂದು ಹಲವು ದಶಕಗಳ ಕಾಲದಿಂದಲೂ ಹೋರಾಟ ನಡೆದುಕೊಂಡು ಬಂದಿದೆ. ಹೀಗಾಗಿ ಬದಲಾದ ಸನ್ನಿವೇಶದಲ್ಲಿ ಹೆಸರನ್ನು ಬದಲಾವಣೆ ಮಾಡಲಾಗಿತ್ತಾದರೂ, ಅಧಿಕೃತವಾಗಿ ಬೈಲಾದಲ್ಲಿ ಹೆಸರು ಬದಲಿಸಿರಲಿಲ್ಲ. ಹೀಗಾಗಿ ವೀರಶೈವ-ಲಿಂಗಾಯತ ಎಂದು ಸೇರ್ಪಡೆ ಮಾಡಲಾಗಿತ್ತು. ಆದರೆ, ಅದು ಕಾನೂನು ಬದ್ಧವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ವಿಶೇಷ ಸರ್ವಸದಸ್ಯರ ಸಭೆ ಕರೆಯಲಾಗಿತ್ತು. ಆದರೆ, ಸಭೆಯಲ್ಲಿ 113 ವರ್ಷಗಳಿಂದ ಇರುವ ಹೆಸರು ಬದಲಿಸಬಾರದು. ಹಾನಗಲ್ಲ ಕುಮಾರಸ್ವಾಮಿ ಅವರಿಟ್ಟ ಹೆಸರನ್ನು ಹಾಗೆಯೇ ಉಳಿಸಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ.
ತರಳಬಾಳು ಸಭಾಂಗಣದಲ್ಲಿ ನಡೆದ ವಿಶೇಷ ಮಹಾಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದ್ದು, ಹಾಗೊಂದು ವೇಳೆ ಲಿಂಗಾಯತ ಪದವನ್ನು ಸೇರ್ಪಡೆ ಮಾಡಲೇಬೇಕು ಎಂಬ ಒತ್ತಾಯ ಕೇಳಿಬಂದಲ್ಲಿ ಅಧ್ಯಕ್ಷ ಶಾಮನೂರು ಶಂಕರಪ್ಪ ನೇತೃತ್ವದಲ್ಲಿ ರಚಿತವಾಗುವ ಸಮಿತಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂದು ಸಭೆ ನಿರ್ಧರಿಸಿದೆ.
ಸಭೆಯಲ್ಲಿ ಮಾಜಿ ಸಚಿವ ಎಂ.ವಿ.ರಾಜಶೇಖರನ್, ಮಹಾಸಭಾ ಅಧ್ಯಕ್ಷ ಶಾಮನೂರು ಶಂಕರಪ್ಪ, ಹಿರಿಯರಾದ ಭೀಮಣ್ಣ ಖಂಡ್ರೆ, ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ಕಾರ್ಯದರ್ಶಿ ಸಚ್ಚಿದಾನಂದಮೂರ್ತಿ ಸೇರಿದಂತೆ ಮಹಾಸಭಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
‘ಲಿಂಗಾಯತ ಪದವನ್ನಿಟ್ಟುಕೊಂಡು ರಾಜಕೀಯ ಕಾರಣಕ್ಕಾಗಿ ಸಮುದಾಯವನ್ನು ಒಡೆಯಲೆತ್ನಿಸುತ್ತಿದ್ದಾರೆ. ಹೀಗಾಗಿ ಈ ಲಿಂಗಾಯತ ಪದ ಪ್ರಸ್ತಾವವೇ ಬೇಡ. ಹಾಗೊಮ್ಮೆ ಅನಿವಾರ್ಯ ಎನಿಸಿದಲ್ಲಿ ಶಾಮನೂರು ಶಂಕರಪ್ಪ ನೇತೃತ್ವದ ಸಮಿತಿ ಈ ಬಗ್ಗೆ ತೀರ್ಮಾನಿಸಲಿದೆ’







