ಐಷಾರಾಮಿ ರೈಲುಗಳಲ್ಲಿ ಉಚಿತ ಪಾಸ್: ರೈಲ್ವೆಗೆ ಸಂಸದೀಯ ಸಮಿತಿಯ ತರಾಟೆ

ಹೊಸದಿಲ್ಲಿ,ಜ.7: ಐಷಾರಾಮಿ ರೈಲುಗಳು ತಮ್ಮ ಸಾಮರ್ಥ್ಯದ ಕೇವಲ ಶೇ.30ರಷ್ಟು ಪ್ರಯಾಣಿಕರೊಂದಿಗೆ ಸಂಚರಿಸುತ್ತಿದ್ದರೂ ಅವುಗಳಲ್ಲಿ ಪ್ರಯಾಣಕ್ಕಾಗಿ ಉಚಿತ ಪಾಸ್‌ಗಳನ್ನು ನೀಡುತ್ತಿರುವುದಕ್ಕಾಗಿ ರೈಲ್ವೆ ಇಲಾಖೆಯನ್ನು ಸಂಸದೀಯ ಸಮಿತಿಯೊಂದು ತೀವ್ರ ತರಾಟೆಗೆತ್ತಿಕೊಂಡಿದೆ.
ಐದು ಐಷಾರಾಮಿ ರೈಲುಗಳಾದ ಮಹಾರಾಜಾ ಎಕ್ಸ್‌ಪ್ರೆಸ್, ಗೋಲ್ಡನ್ ಚಾರಿಯಟ್, ರಾಯಲ್ ರಾಜಸ್ಥಾನ ಆನ್ ವೀಲ್ಸ್, ಡೆಕ್ಕನ್ ಒಡೆಸ್ಸಿ ಮತ್ತು ಪ್ಯಾಲೇಸ್ ಆನ್ ವೀಲ್ಸ್‌ಗಳಲ್ಲಿ ರೈಲ್ವೆ ಮಂಡಳಿ ಮತ್ತು ಐಆರ್‌ಸಿಟಿಸಿಯ ಶಿಫಾರಸುಗಳ ಮೇಲೆ ಉಚಿತವಾಗಿ ಪ್ರಯಾಣಿಸಿರುವ ನೂರಾರು ಪ್ರಯಾಣಿಕರ ಹೆಸರುಗಳನ್ನು ಸಮಿತಿಯು ತನ್ನ ಇತ್ತೀಚಿನ ವರದಿಯಲ್ಲಿ ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ ಓರ್ವ ಮಾಜಿ ಆಪ್ತ ಕಾರ್ಯದರ್ಶಿ, ರೈಲ್ವೆ ಸಚಿವರ ಮಾಜಿ ವಿಶೇಷ ಕರ್ತವ್ಯಾಧಿಕಾರಿ ಮತ್ತು ಇತರ ರೈಲ್ವೆ ವಲಯಗಳ ವಿವಿಧ ವಿಭಾಗೀಯ ಪ್ರಬಂಧಕರು ಸೇರಿದ್ದಾರೆ.
ರೈಲ್ವೆ ಮತ್ತು ಐಆರ್‌ಸಿಟಿಸಿ ರಾಜ್ಯ ಪ್ರವಾಸೋದ್ಯಮ ನಿಗಮಗಳ ಸಹಭಾಗಿತ್ವದಲ್ಲಿ ಈ ಐಷಾರಾಮಿ ರೈಲುಗಳನ್ನು ಓಡಿಸುತ್ತಿವೆ. ಈ ರೈಲುಗಳಲ್ಲಿ ಪ್ರಯಾಣಕ್ಕಾಗಿ 500 ಡಾ.ಗಳಿಂದ 650 ಡಾ.ವರೆಗೆ(ಪ್ರಸಕ್ತ ವಿನಿಮಯ ದರದಂತೆ 31,637.50 ರೂ.ನಿಂದ 41,128.75 ರೂ.ವರೆಗೆ) ದರಗಳನ್ನು ವಿಧಿಸಲಾಗುತ್ತಿದೆ.
ರೈಲ್ವೆ ಮಂಡಳಿ ಅಥವಾ ಐಆರ್‌ಸಿಟಿಸಿ ಅಥವಾ ರಾಜ್ಯ ಪ್ರವಾಸೋದ್ಯಮ ನಿಗಮಗಳ ಶಿಫಾರಸಿನ ಮೇರೆಗೆ ಈ ಐಷಾರಾಮಿ ರೈಲುಗಳಲ್ಲಿ ಪ್ರಯಾಣಕ್ಕೆ ಉಚಿತ ಪಾಸ್‌ಗಳ ನೀಡಿಕೆ ಮುಂದುವರಿಸಿರುವುದು ದಿಗಿಲು ಮೂಡಿಸಿದೆ ಎಂದು ಸಮಿತಿಯ ಅಧ್ಯಕ್ಷರಾಗಿರುವ ಸಂಸದ ಸುದೀಪ ಬಂದೋಪಾಧ್ಯಾಯ ಅವರು ಹೇಳಿದರು.
ಈ ಐಷಾರಾಮಿ ರೈಲುಗಳ ಆದಾಯ ಅವುಗಳ ಕಾರ್ಯನಿರ್ವಹಣೆಗೇ ಸಾಲುತ್ತಿಲ್ಲ. ಹೀಗಿರುವಾಗಿ ಉಚಿತ ಪಾಸುಗಳ ನೀಡಿಕೆಯ ಅಗತ್ಯ ಸಮಿತಿಗೆ ಅರ್ಥವಾಗುತ್ತಿಲ್ಲ ಎಂದು ವರದಿಯು ಕಿಡಿಕಾರಿದೆ.
ಸಾರ್ವಜನಿಕ ಸಂಸ್ಥೆಯಾಗಿ ಮುಂಗಡ ಪತ್ರದಿಂದ ಆರ್ಥಿಕ ನೆರವು ಪಡೆಯುತ್ತಿರುವ ರೈಲ್ವೆಗೆ ಈ ಐಷಾರಾಮಿ ರೈಲುಗಳಲ್ಲಿ ಪ್ರಯಾಣಕ್ಕಾಗಿ ಕೆಲವು ಜನರಿಗೆ ಉಚಿತ ಪಾಸ್‌ಗಳನ್ನು ನೀಡಿ ತೆರಿಗೆದಾರರ ಹಣವನ್ನು ದುರುಪಯೋಗಿಸಿಕೊಳ್ಳುವ ಹಕ್ಕು ಇಲ್ಲ ಎಂದು ಸಮಿತಿಯು ಝಾಡಿಸಿದೆ.
ಉಚಿತ ಪಾಸ್‌ಗಳನ್ನು ನೀಡಲು ಕಾರಣಗಳನ್ನು ತಿಳಿಯಲು ಬಯಸಿರುವ ಸಮಿತಿಯು, ಈ ಪದ್ಧತಿಯನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿದೆ. ಈ ನಿಟ್ಟಿನಲ್ಲಿ ತೆಗೆದುಕೊಳ್ಳಲಾ ಗಿರುವ ಕ್ರಮಗಳನ್ನು ತನಗೆ ತಿಳಿಸುವಂತೆ ಅದು ನಿರ್ದೇಶ ನೀಡಿದೆ.