ಇಲಿ ಸತ್ತದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಬಾಲಕಿ

ಭೋಪಾಲ್, ಜ. 7: ತನ್ನ ಸಾಕು ಇಲಿ ಸಾವನ್ನಪ್ಪಿರುವುದರಿಂದ ಖಿನ್ನತೆಗೆ ಒಳಗಾದ 12 ವರ್ಷದ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿವ್ಯಾಂಶಿ ರಾಥೋಡ್ ತನ್ನ ಸುರ್ಭಿ ವಿಹಾರ್ ಮನೆಯಲ್ಲಿ ನಿನ್ನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿನ್ನೆ ಬೆಳಗ್ಗೆ ದಿವ್ಯಾಂಶಿ ಸಾಕುತ್ತಿದ್ದ ಬಿಳಿ ಇಲಿ ಮೃತಪಟ್ಟಿರುವುದರಿಂದ ಆಕೆ ಖಿನ್ನಳಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಅಯೋಧ್ಯೆ ನಗರ್ ಪೊಲೀಸ್ ಠಾಣೆಯ ಉಸ್ತುವಾರಿ ಬಲ್‌ಜೀತ್ ಸಿಂಗ್ ಹೇಳಿದ್ದಾರೆ.
ಕಳೆದ ವಾರ ದಿವ್ಯಾಂಶಿ ಬಿಳಿ ಇಲಿಯೊಂದನ್ನು ಸಾಕಲು ತಂದಿದ್ದರು. ಇದು ಶನಿವಾರ ಬೆಳಗ್ಗೆ ಮೃತಪಟ್ಟಿತ್ತು. ಎರಡು ತಿಂಗಳ ಹಿಂದೆ ಆಕೆಯ ಸಾಕು ನಾಯಿ ಕೂಡ ಮೃತಪಟ್ಟಿತ್ತು. ಇದರಿಂದ ಖಿನ್ನಳಾದ ಬಾಲಕಿ ಆತ್ಮಹತ್ಯೆಗೆ ಶರಣಾದಳು ಎಂದು ಅವರು ತಿಳಿಸಿದ್ದಾರೆ.
ಇಲಿಯ ಮೃತದೇಹ ದಫನ ಮಾಡಲಾದ ಜಾಗದಲ್ಲಿ ಬಾಲಕಿ ಹೂವು ಇರಿಸಿದ್ದಳು. ಇಲಿಯನ್ನು ದಫನ ಮಾಡಿ ಹೂವು ಇರಿಸಿದ ಬಳಿಕ ಆಕೆ ತನ್ನ ಕೊಠಡಿಗೆ ತೆರಳಿದ್ದಳು ಹಾಗೂ ಚಿಲಕ ಹಾಕಿಕೊಂಡಿದ್ದಳು. ತಾಯಿಯ ಕರೆಗೆ ಬಾಲಕಿ ಓಗೊಡದ ಹಿನ್ನೆಲೆಯಲ್ಲಿ ನೆರೆಹೊರೆಯವರು ನೆರವಿನಿಂದ ಕೊಠಡಿಯ ಬಾಗಿಲು ಒಡೆಯಲಾಯಿತು. ಅಲ್ಲಿ ದಿವ್ಯಾಂಶಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಸಿಂಗ್ ಹೇಳಿದ್ದಾರೆ.