ಮೇವು ಹಗರಣದ ತೀರ್ಪಿನ ಬಗ್ಗೆ ಶತ್ರುಘ್ನ ಸಿನ್ಹಾ ಅಸಮಾಧಾನ

ಹೊಸದಿಲ್ಲಿ, ಜ. 7: ಮೇವು ಹಗರಣಕ್ಕೆ ಸಂಬಂಧಿಸಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ಗೆ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಹಾಗೂ ನಟ ಶತ್ರುಘ್ನ ಸಿನ್ಹಾ, ತನಗೆ ‘ತೀರ್ಪಿನಿಂದ ನಿರಾಶೆಯಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಸರಣಿ ಟ್ವೀಟ್‌ನಲ್ಲಿ ಸಮೂಹದ ನಾಯಕ ಎಂದು ಕರೆಯುವ ಮೂಲಕ ಲಾಲು ಪ್ರಸಾದ್ ಅವರನ್ನು ಪ್ರಶಂಸಿಸಿರುವ ಸಿನ್ಹಾ, ಅಪೇಕ್ಷಣೀಯ ಪರಿಹಾರ ದೊರಕಲು ಉನ್ನತ ನ್ಯಾಯಾಲಯ ಸಂಪರ್ಕಿಸಬೇಕು ಎಂದಿದ್ದಾರೆ.
ಅವರ ಗೆಳಯನಾಗಿ ನಾನು ಸ್ವ ಸಾಮರ್ಥ್ಯದಿಂದ ಈ ಟ್ವೀಟ್ ಮಾಡುತ್ತಿದ್ದೇನೆ, ಯಾವುದೇ ರಾಜಕೀಯ ಸಾಮರ್ಥ್ಯದಿಂದ ಅಲ್ಲ. ನಾನು ಪಾವತಿ ಟ್ರೋಲರ್ ಹಾಗೂ ಸರಕಾರಿ ದರ್ಬಾರಿಗಳಿಗೆ ಹೆದರಲಾರೆ. ನನಗೆ ದ್ವೇಷ ರಾಜಕಾರಣದಲ್ಲಿ ನಂಬಿಕೆ ಇಲ್ಲ. ಆರೋಗ್ಯಕರ ರಾಜಕಾರಣದ ಬಗ್ಗೆ ನನಗೆ ದೃಡವಾದ ನಂಬಿಕೆ ಇದೆ. ರಾಂಚಿ ನ್ಯಾಯಾಲಯ ನೀಡಿದ ತೀರ್ಪಿನಿಂದ ನನಗೆ ನಿಜವಾಗಿಯೂ ನಿರಾಶೆಯಾಗಿದೆ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ. ಅವರ ಗೆಳೆಯರು, ಬೆಂಬಲಿಗರು, ಹಿತೈಷಿಗಳು ಹಾಗೂ ಕುಟುಂಬ ಸದಸ್ಯರನ್ನು ನಾನು ಇಷ್ಟಪಡುತ್ತೇನೆ. ನನಗೆ ನ್ಯಾಯಾಂಗದ ಬಗ್ಗೆ ಅಪಾರ ಗೌರವವಿದೆ. ತೀರ್ಪು ನೀಡುವ ನ್ಯಾಯಾಧೀಶರ ಬಗೆಗೂ ಗೌರವವಿದೆ. ಆದರೆ, ಈ ತೀರ್ಪು ಹಾಗೂ ಲಾಲು ಪ್ರಸಾದ್ ಅವರಿಗೆ ನೀಡಿದ ಕಠಿಣ ಶಿಕ್ಷೆ ಬಗ್ಗೆ ನನಗೆ ತುಂಬಾ ದುಃಖವಾಗಿದೆ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.