ಗಾಂಧಿ ಹತ್ಯೆ ಕುರಿತ ಪುಸ್ತಕದ ಮೇಲಿನ ನಿಷೇಧ ತೆರವಿಗೆ ಹೈಕೋರ್ಟ್‌ಗೆ ಮೊರೆ

ಮುಂಬೈ,ಜ.7: ಐದು ದಶಕಗಳಿಗೂ ಹಿಂದೆ ಪೋರ್ಚುಗಲ್‌ನಲ್ಲಿ ಪ್ರಕಟಗೊಂಡಿದ್ದ ಪುಸ್ತಕವೊಂದರ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಕೋರಿ ಅರ್ಜಿಯೊಂದನ್ನು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ಮಹಾತ್ಮಾ ಗಾಂಧಿಯವರ ಹತ್ಯೆಯ ಹಿಂದೆ ವ್ಯಾಪಕ ಒಳಸಂಚು ನಡೆದಿತ್ತು ಎಂದು ಈ ಪುಸ್ತಕವು ಆರೋಪಿಸಿದೆ.
ಅರ್ಜಿದಾರರಾಗಿರುವ ನಗರದ ಸಂಶೋಧಕ ಮತ್ತು ಬಲಪಂಥೀಯ ಸಂಘಟನೆ ಅಭಿನವ ಭಾರತ್‌ನ ಟ್ರಸ್ಟಿ ಪಂಕಜ್ ಫಡ್ನಿಸ್ ಅವರು, ಪೋರ್ಚುಗಲ್‌ನ ಸಾಹಿತಿ ಲಾರೆನ್ಸೊ ಡಿ ಸದ್ವಾಂದರ್ ಅವರು ಬರೆದಿರುವ ‘ಹೂ ಕಿಲ್ಡ್ ಗಾಂಧಿ?’ ಪುಸ್ತಕದ ಆಮದನ್ನು ನಿಷೇಧಿಸಿ ಕೇಂದ್ರ ಸರಕಾರವು 1979, ಡಿ.29ರಂದು ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರಿದ್ದಾರೆ.
1963ರಲ್ಲಿ ಪ್ರಕಟಗೊಂಡಿದ್ದ ಈ ಪುಸ್ತಕವು ಕಳಪೆ ಸಂಶೋಧನೆಯಾಗಿದೆ ಮತ್ತು ಪ್ರಚೋದನಕಾರಿಯಾಗಿದೆ ಎಂದು ಕೇಂದ್ರವು ನಿಷೇಧದ ಸಂದರ್ಭದಲ್ಲಿ ಹೇಳಿತ್ತು.
ನಿಷೇಧವು ನಿರಂಕುಶ ಮತ್ತು ಅಸಮರ್ಥನೀಯವಾಗಿದ್ದು, ಅಭಿವ್ಯಕ್ತಿ ಮತ್ತು ಚಿಂತನೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸಿದೆ ಎಂದು ಅರ್ಜಿಯು ವಾದಿಸಿದೆ.
ಗಾಂಧಿ ಹತ್ಯೆ ಕುರಿತು ಮರುತನಿಖೆಯನ್ನು ಕೋರಿ ಫಡ್ನಿಸ್ ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ಈ ಅರ್ಜಿಯ ವಿಚಾರಣೆ ಜ.12ರಂದು ನಡೆಯಲಿದೆ.