ಬಿಎಂಶ್ರೀ ಕನ್ನಡಕ್ಕಾಗಿ ಸರ್ವಸ್ವನ್ನೂ ಅರ್ಪಿಸಿಕೊಂಡ ಕಣ್ವ ಮಹರ್ಷಿ : ಎಸ್.ಶಿವರಾಂ

ಮಂಡ್ಯ, ಜ.7: ಬಿ.ಎಂ.ಶ್ರೀಕಂಠಯ್ಯನವರು ಕನ್ನಡಕ್ಕಾಗಿ ತಮ್ಮ ಸರ್ವಸ್ವವನ್ನೂ ಅರ್ಪಿಸಿಕೊಂಡ ಕಣ್ವ ಮಹರ್ಷಿ. ಕನ್ನಡಕ್ಕೆ ಬೆಲೆಯೇ ಇಲ್ಲದ ಕಾಲದಲ್ಲಿ ಮಾತೃಭಾಷೆಯನ್ನು ಗಟ್ಟಿಯಾಗಿ ನೆಲೆ ನಿಲ್ಲಿಸದ ಪುಣ್ಯ ಪುರುಷ ಎಂದು ಜಿಲ್ಲಾ ಬ್ರಾಹ್ಮಣಸಭಾ ಅಧ್ಯಕ್ಷ ಬೆಳ್ಳೂರ ಎಸ್.ಶಿವರಾಂ ಹೇಳಿದ್ದಾರೆ.
ಜಿಲ್ಲಾ ಬಬ್ಬೂರು ಕೆಮ್ಮೆ ಸೇವಾ ಬಳಗದ ವತಿಯಿಂದ ನಗರದ ಬ್ರಾಹ್ಮಣ ಸಭಾ ಭವನದಲ್ಲಿ ರವಿವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ, ವಾರ್ಷಿಕೋತ್ಸವ ಹಾಗು ಬಿ.ಎಂ.ಶ್ರೀ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಕಂಠಯ್ಯ ಅವರು ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಬೆಲೆ ಇಲ್ಲದಿದ್ದ ಕಾಲದಲ್ಲಿ ಕನ್ನಡ ಭಾಷೆಯನ್ನು ಸದೃಢವಾಗಿ ಕಟ್ಟಿದರು. ಕನ್ನಡ ಸೇವೆಗಾಗಿ ಬಹುದೊಡ್ಡ ಶಿಷ್ಯಕೋಟಿಯನ್ನು ನಿರ್ಮಾಣ ಮಾಡಿದರು ಎಂದು ಅವರು ತಿಳಿಸಿದರು.
ಸಾಹಿತ್ಯ ಪರಿಷತ್ತನ್ನು ಬಲಿಷ್ಠವಾಗಿ ಕಟ್ಟಿ ಕನ್ನಡಕ್ಕೊಂದು ಬಾವುಟ, ಕನ್ನಡ ಪರೀಕ್ಷೆಗಳು, ಕನ್ನಡ ಅಚ್ಚುಕೂಟ, ವಯಸ್ಕರ ಶಿಕ್ಷಣ ಯೋಜನೆ, ಕನ್ನಡ ನಿಘಂಟು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗ ತೆರೆದು ಕನ್ನಡಕ್ಕೆ ಬಹುದೊಡ್ಡ ಋಣ ತೀರಿಸಿದ್ದಾರೆ ಎಂದು ಅವರು ಸ್ಮರಿಸಿದರು.
ಬಿ.ಎಂ.ಶ್ರೀಯವರ ಜೀವನ ಮತ್ತು ಸಾಧನೆ ಕುರಿತು ಮಾತನಾಡಿದ ಲೇಖಕಿ ಡಾ. ಶುಭಶ್ರೀ ಪ್ರಸಾದ್, ಬಿ.ಎಂ.ಶ್ರೀಯವರು ಕನ್ನಡವನ್ನು ಹೇಗೆ ಬಳಸಬೇಕು, ಬೆಳೆಸಬೇಕು ಎಂಬುದರ ಬಗ್ಗೆ ಮಾರ್ಗಸೂಚಿ ನೀಡಿದ್ದಾರೆ. ಅವರ ನಾಟಕಗಳು, ಕವನಗಳು, ಪ್ರಬಂಧಗಳು, ಇಂಗ್ಲೀಷ್ ಸಾಹಿತ್ಯವೂ ಅಚ್ಚರಿಪಡುವಂತೆ ಮೂಡಿ ಬಂದಿದೆ ಎಂದರು.
ಪತ್ರಕರ್ತ ಡಿ.ಎನ್.ಶ್ರೀಪಾದು ಮಾತನಾಡಿ, ಬಿ.ಎಂ.ಶ್ರೀ ಕನ್ನಡಕ್ಕಾಗಿ ತಮ್ಮ ಸರ್ವಸ್ವವನ್ನೂ ಅರ್ಪಿಸಿಕೊಂಡರು. ಅವರ ವೈಯಕ್ತಿಕ ಬದುಕು ದುರಂತಮಯವಾಗಿತ್ತು. ಕನ್ನಡಕ್ಕಾಗಿ ಅವರು ಎಲ್ಲವನ್ನೂ ಕಳೆದುಕೊಂಡರು ಎಂದು ವಿಷಾದಿಸಿದರು.
ಸುಗಮ ಸಂಗೀತ ಗಾಯಕಿ ಶೈಲಜಾ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ವಿದ್ಯಾಗಣಪತಿ ಗಮಕ ಶಿಕ್ಷಣಾಲಯದ ವಿದ್ಯಾರ್ಥಿಗಳು ಬಿ.ಎಂ.ಶ್ರೀ ಗೀತೆಗಳನ್ನು ಹಾಡಿದರು. ಇದೇ ವೇಳೆ ವಿವಿಧ ಗಣ್ಯರನ್ನು ಗೌರವಿಸಲಾಯಿತು.
ಬಬ್ಬೂರು ಸೇವಾ ಬಳಗದ ಅಧ್ಯಕ್ಷ ಎಚ್.ಎನ್. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಬ್ರಾಹ್ಮಣಸಭಾದ ಕಾರ್ಯದರ್ಶಿ ವಿಜಯಲಕ್ಷ್ಮಿ ಶ್ರೀಹರ್ಷ, ಎಚ್.ಎಸ್. ರಾಮಕೃಷ್ಣ, ಬೆಳ್ಳೂರು ಎಸ್. ಆನಂದ ಇತರರು ಉಪಸ್ಥಿತರಿದ್ದರು.







