ಜ.8ರಂದು ಸಿಎಂ ಉಡುಪಿಗೆ: ಸಚಿವ ಪ್ರಮೋದ್ ಮನೆಯಲ್ಲಿ ವಾಸ್ತವ್ಯ

ಉಡುಪಿ, ಜ.7: ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.8ರಂದು ಉಡುಪಿ ಜಿಲ್ಲೆಯ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮಂಗಳೂರಿನಿಂದ ಬೈಂದೂರಿನ ಅರೆಶಿರೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಮುಖ್ಯಮಂತ್ರಿ ಬೈಂದೂರಿನಲ್ಲಿ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಮುಗಿಸಿ, ಅಲ್ಲಿಂದ ಆದಿಉಡುಪಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ನಿವಾಸದಲ್ಲಿ ಭೋಜನ ಮುಗಿಸಿ, ಬ್ರಹ್ಮಾವರದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿಂದ ಕಾಪು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಖ್ಯಮಂತ್ರಿಗಳ ರಾತ್ರಿ ವಾಸ್ತವ್ಯದ ಸ್ಥಳವನ್ನು ಬದಲಾಯಿಸಲಾಗಿದ್ದು, ಉಡುಪಿಯ ಪ್ರವಾಸಿ ಮಂದಿರದ ಬದಲು ಸಚಿವ ಪ್ರಮೋದ್ ಮಧ್ವರಾಜ್ ಅವರ ಉಪ್ಪೂರು ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜ. 9ರಂದು ಬೆಳಗ್ಗೆ 10:30ಕ್ಕೆ ಆದಿಉಡುಪಿ ಹೆಲಿಪ್ಯಾಡ್‌ನಿಂದ ಮಡಿಕೇರಿಗೆ ತೆರಳಲಿರುವರು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಒಂದು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದ್ದು, ಅಣ್ಣಾಮಲೈ ಸೇರಿದಂತೆ ಎರಡು ಎಸ್ಪಿ, ಒಬ್ಬರು ಹೆಚ್ಚುವರಿ ಎಸ್ಪಿ, ಏಳು ಡಿವೈಎಸ್ಪಿ, 15 ವೃತ್ತ ನಿರೀಕ್ಷಕರು, 20 ಉಪ ನಿರೀಕ್ಷಕರು, 350 ಪೊಲೀಸ್ ಸಿಬ್ಬಂದಿ, 200 ಗೃಹರಕ್ಷಕ ದಳದ ಸಿಬ್ಬಂದಿ, 8 ಜಿಲ್ಲಾ ಸಶಸ್ತ್ರ ಮೀಸಲು ಪಡೆ, 2 ಕ್ಷಿಪ್ರ ಕಾರ್ಯಾಚರಣೆ ಪಡೆ, 3 ಕೆಎಸ್‌ಆರ್‌ಪಿಯನ್ನು ನಿಯೋಜಿಸಲಾಗುವುದು ಎಂದು ಅವರು ತಿಳಿಸಿದರು.







