ಯುಐಡಿಎಐ ಕ್ರಮಕ್ಕೆ ಪತ್ರಕರ್ತರ ಸಂಘ ಖಂಡನೆ
ಆಧಾರ್ ಸೋರಿಕೆ ಕುರಿತು ವರದಿ ಮಾಡಿದ್ದ ಪತ್ರಕರ್ತೆ ವಿರುದ್ಧ ಪ್ರಕರಣ

ಹೊಸದಿಲ್ಲಿ, ಜ.7: ಆಧಾರ್ ಅಂಕಿಅಂಶಗಳು ಸೋರಿಕೆಯಾಗುತ್ತಿರುವ ಬಗ್ಗೆ ವರದಿ ಮಾಡಿದ ಪತ್ರಕರ್ತೆ ವಿರುದ್ಧ ದೂರು ದಾಖಲಿಸಿರುವ ಭಾರತೀಯ ವಿಶೇಷ ಗುರುತು ಪ್ರಾಧಿಕಾರ (ಯುಐಡಿಎಐ) ಯ ಕ್ರಮವನ್ನು ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.
ಈ ಕ್ರಮವನ್ನು ಸಂಘವು ‘ನ್ಯಾಯಸಮ್ಮತವಲ್ಲದ ನಡೆ ಮತ್ತು ಮಾಧ್ಯಮದ ವಾಕ್ ಸ್ವಾತಂತ್ರದ ಮೇಲೆ ನೇರವಾದ ದಾಳಿ’ ಎಂದು ಟೀಕಿಸಿದೆ. ಏಜೆಂಟ್‌ಗಳಿಗೆ ಸಣ್ಣ ಮೊತ್ತದ ಹಣವನ್ನು ನೀಡುವ ಮೂಲಕ ವ್ಯಕ್ತಿಯೊಬ್ಬರು ತಮ್ಮ ಆಧಾರ್ ಕಾರ್ಡ್‌ನಲ್ಲಿ ನೀಡಿರುವ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಟ್ರಿಬ್ಯೂನ್ ಪತ್ರಿಕೆಯ ವರದಿಗಾರ್ತಿ ರಚನಾ ಖೈರಾ ವರದಿ ಮಾಡಿದ್ದರು. ಈ ಆರೋಪವನ್ನು ನಿರಾಕರಿಸಿರುವ ಆಧಾರ್ ಪ್ರಾಧಿಕಾರ, ಆಧಾರ್‌ನಲ್ಲಿ ನೀಡಲಾದ ಮಾಹಿತಿಯ ಸೋರಿಕೆ ಅಸಾಧ್ಯ ಎಂದು ತಿಳಿಸಿದ್ದು, ವರದಿಗಾರ್ತಿಯ ವಿರುದ್ಧ ಐಪಿಸಿ ಸೆಕ್ಷನ್ 419 (ಮಾರುವೇಷದಲ್ಲಿ ವಂಚನೆ), 420 (ವಂಚನೆ), 468 (ದಾಖಲೆಗಳ ನಕಲು), 471 (ನಕಲಿ ದಾಖಲೆಗಳ ಬಳಕೆ) ಸಹಿತ ಆಧಾರ್ ಕಾಯ್ದೆ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿದೆ. ಪ್ರಾಧಿಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸಿರುವ ಪತ್ರಕರ್ತರ ಸಂಘ, ಪ್ರಾಧಿಕಾರವು ಮಾಹಿತಿ ಸೋರಿಕೆಯ ಬಗ್ಗೆ ಆಂತರಿಕ ತನಿಖೆ ನಡೆಸಿ ಅದರ ವರದಿಯನ್ನು ಬಹಿರಂಗಪಡಿಸಬೇಕಿತ್ತು ಎಂದು ತಿಳಿಸಿದೆ. ಈ ಪ್ರಕರಣದಲ್ಲಿ ಸಂಬಂಧಿತ ಕೇಂದ್ರ ಸಚಿವಾಲಯವು ಮಧ್ಯ ಪ್ರವೇಶಿಸಿ ಪತ್ರಕರ್ತೆಯ ವಿರುದ್ಧ ದಾಖಲಿಸಿರುವ ದೂರನ್ನು ವಾಪಸ್ ಪಡೆದುಕೊಳ್ಳಬೇಕು ಮತ್ತು ಈ ಪ್ರಕರಣದಲ್ಲಿ ಪಕ್ಷಾತೀತವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.