ಯಮನ್ ನಲ್ಲಿ ಭಾರತದ ‘ಆಪರೇಶನ್ ರಾಹತ್’ ನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು ಈ ಒಂದು ಕರೆ!

ಹೊಸದಿಲ್ಲಿ, ಜ.7: ಪ್ರಧಾನಿ ಮೋದಿಯವರು ಸೌದಿ ಅರೇಬಿಯಾದ ರಾಜರಿಗೆ ಮಾಡಿದ ಒಂದು ಕರೆಯು 2015ರಲ್ಲಿ ಯುದ್ಧಪೀಡಿತ ಯೆಮೆನ್‌ನಿಂದ ಭಾರತೀಯರು ಮತ್ತು ಇತರ ವಿದೇಶಿಗರ ಸುರಕ್ಷಿತ ತೆರವು ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರವಹಿಸಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ರವಿವಾರ ತಿಳಿಸಿದ್ದಾರೆ.
2015ರಲ್ಲಿ ಸೌದಿ ಅರೇಬಿಯಾ ಮತ್ತದರ ಮಿತ್ರಪಡೆಗಳು ಯೆಮೆನ್‌ನಲ್ಲಿ ನಡೆಸಿದ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ 4,000ಕ್ಕೂ ಅಧಿಕ ಭಾರತೀಯರು ಮತ್ತು ಇತರ ವಿದೇಶಿಗರನ್ನು ಅಲ್ಲಿಂದ ತೆರವುಗೊಳಿಸುವ ಸಲುವಾಗಿ ಭಾರತೀಯ ಸಶಸ್ತ್ರಪಡೆ ಅಪರೇಶನ್ ರಾಹತ್ ಕಾರ್ಯಾಚರಣೆ ನಡೆಸಿತ್ತು.
ಎಪ್ರಿಲ್ ಒಂದರಂದು ಅದೆನ್ ಬಂದರಿನಿಂದ ಆರಂಭವಾದ ಸಮುದ್ರ ಮೂಲಕದ ತೆರವು ಕಾರ್ಯಾಚರಣೆ ಹನ್ನೊಂದು ದಿನಗಳ ಕಾಲ ನಡೆಯಿತು. ಆಸಿಯಾನ್-ಇಂಡಿಯಾ ಪ್ರವಾಸಿ ಭಾರತೀಯ ದಿವಸದಲ್ಲಿ ಭಾರತೀಯ ಪ್ರಜೆಗಳನ್ನುದ್ದೇಶಿಸಿ ಮಾತನಾಡಿದ ಸ್ವರಾಜ್ ಯೆಮೆನ್‌ನಲ್ಲಿ ಸೌದಿ ಪಡೆಗಳು ನಡೆಸಿದ್ದ ಅವ್ಯಾಹತ ಬಾಂಬ್ ದಾಳಿಯಿಂದಾಗಿ ಆ ಪ್ರದೇಶದಿಂದ ಭಾರತೀಯರನ್ನು ತೆರವುಗೊಳಿಸುವುದು ಅಸಾಧ್ಯವೆಂಬಂತಾಗಿತ್ತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಳಿಗೆ ತೆರಳಿ ಅವರು ಸೌದಿ ದೊರೆಯ ಜೊತೆ ಹೊಂದಿರುವ ಉತ್ತಮ ಸಂಬಂಧವನ್ನು ಈ ಸಮಯದಲ್ಲಿ ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದೆ ಎಂದು ಸ್ವರಾಜ್ ವಿವರಿಸಿದರು.
ಅದಕ್ಕೊಪ್ಪಿದ ಪ್ರಧಾನಿಯವರು ಕೂಡಲೇ ಸೌದಿ ದೊರೆಗೆ ಕರೆ ಮಾಡಿ ಭಾರತೀಯರ ತೆರವಿಗೆ ದಾರಿ ಮಾಡಿಕೊಡುವಂತೆ ಮತ್ತು ಬಾಂಬ್ ದಾಳಿಯನ್ನು ಒಂದು ವಾರದ ಮಟ್ಟಿಗೆ ನಿಲ್ಲಿಸುವಂತೆ ಮನವಿ ಮಾಡಿದ್ದರು. ಭಾರತದ ಮನವಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದ ದೊರೆ ಸಂಪೂರ್ಣ ಬಾಂಬ್ ದಾಳಿಯನ್ನು ನಿಲ್ಲಿಸಲು ತಾನು ಅಸಮರ್ಥನಾಗಿದ್ದೇನೆ ಎಂದು ತಿಳಿಸಿದ್ದರು. ಆದರೂ ಪ್ರಧಾನಿ ಮೋದಿಯ ಮನವಿಗೆ ಮಣಿದು ಪ್ರತಿದಿನ ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ಬಾಂಬ್ ದಾಳಿಯನ್ನು ನಿಲ್ಲಿಸುವ ಭರವಸೆಯನ್ನು ಅವರು ನೀಡಿದರು ಎಂದು ಸುಶ್ಮಾ ತಿಳಿಸಿದರು.
ಇದೇ ಸಂದರ್ಭವನ್ನು ಬಳಸಿ ಅದೆನ್ ಬಂದರು ಮತ್ತು ಸನಾ ವಿಮಾನ ನಿಲ್ದಾಣವನ್ನು ತೆರೆಯುವಂತೆ ನಾನು ಯೆಮೆನ್ ಆಡಳಿತಕ್ಕೆ ಮನವಿ ಮಾಡಿದೆ. ಇದರಿಂದಾಗಿ ಭಾರತೀಯ ನಾಗರಿಕರನ್ನು ಜಿಬೌತಿ ಮೂಲಕ ಒಂದು ವಾರದ ಅವಧಿಯಲ್ಲಿ ಪ್ರತಿದಿನ ಎರಡು ಗಂಟೆಗಳ ಕಾಲ ತುರ್ತಾಗಿ ಸ್ಥಳಾಂತರಿಸಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ತಿಳಿಸಿದರು.
ಸಿಂಗಾಪುರದ ಉಪಪ್ರಧಾನಿ ಟಿಯೊ ಚೀ ಹೀನ್ ಅವರ ಉಪಸ್ಥಿತಿಯಲ್ಲಿ ಸುಮಾರು 3000 ಭಾರತೀಯರನ್ನುದ್ದೇಶಿಸಿ ಮಾತನಾಡಿದ ಸ್ವರಾಜ್, ಭಾರತೀಯರಿಗಾಗಿ ತಾನು ಏನು ಮಾಡಲೂ ಸಿದ್ಧ ಎಂದು ಯೆಮೆನ್ ತಿಳಿಸಿದ್ದಾಗಿ ಹೇಳಿದರು. ಈ ಪರಸ್ಪರ ಸಹಕಾರದಿಂದ ಅಪರೇಶನ್ ರಾಹತ್ ಮೂಲಕ 4,800 ಭಾರತೀಯರನ್ನು ಮಾತ್ರವಲ್ಲ 1,972 ಇತರ ದೇಶದ ಪ್ರಜೆಗಳನ್ನು ಯೆಮೆನ್‌ನಿಂದ ತೆರವುಗೊಳಿಸಲಾಯಿತು. ಈ ಕಾರ್ಯಾಚರಣೆಯ ನೇತೃತ್ವವನ್ನು ವಿದೇಶಾಂದ ವ್ಯವಹಾರಗಳ ಸಚಿವೆಯಾಗಿರುವ ಸುಶ್ಮಾ ಸ್ವರಾಜ್ ಮತ್ತು ನಿವೃತ್ತ ಸೇನಾ ಮುಖ್ಯಸ್ಥ ಜನರಲ್ (ನಿವೃತ್ತ) ವಿ.ಕೆ. ಸಿಂಗ್ ವಹಿಸಿದ್ದರು.