ಕಾಂಗ್ರೆಸ್, ಬಿಜೆಪಿಯಿಂದ ಕೋಮು ಸಂಘರ್ಷ ಸೃಷ್ಟಿ : ಬಿ.ಎಚ್.ಚಂದ್ರಶೇಖರ್ ಆರೋಪ

ಮಡಿಕೇರಿ, ಜ.7:ವಿಧಾನಸಬಾ ಚುನಾವಣೆ ಸಮೀಪಿಸುತ್ತಿರುವ ಹಂತದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಕೋಮು ಸಂಘ ರ್ಷವನ್ನು ಹುಟ್ಟು ಹಾಕಿ ಹಿಂದು ಹಾಗೂ ಮುಸ್ಲಿಂ ಮತಗಳನ್ನು ಕ್ರೋಢೀಕರಣ ಮಾಡುವ ಕುತಂತ್ರ ರಾಜಕಾರಣದಲ್ಲಿ ತೊಡಗಿವೆ ಎಂದು ಜಾತ್ಯತೀತ ಜನತಾ ದಳ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ ಬಿ.ಎಚ್.ಚಂದ್ರಶೇಖರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳು ಕೋಮು ಗಲಭೆ ಸೃಷ್ಟಿಸಿ ಜನಸಾಮಾನ್ಯರ ಜೀವದೊಂದಿಗೆ ಆಟವಾಡುತ್ತಿವೆ. ಕಾಟಿಪಳ್ಳದ ದೀಪಕ್ ರಾವ್ ಹತ್ಯೆ ಪ್ರಕರಣವನ್ನು ತಕ್ಷಣ ಕೈಗೆತ್ತಿಕೊಂಡ ಬಿಜೆಪಿ ಅದೇ ಮಹಾದಾಯಿ ನೀರಿಗಾಗಿ ನಡೆಯುತ್ತಿರುವ ಧರಣಿಯ ಬಗ್ಗೆ ಮಾತನಾಡುವ ಗೋಜಿಗೆ ಹೋಗಿಲ್ಲ, ಇದರಿಂದ ಬಿಜೆಪಿ ಸೋಗಲಾಡಿತನ ಜನರಿಗೆ ಅರಿವಾಗಿದೆ ಎಂದು ಟೀಕಿಸಿದರು.
ಯುವ ಸಮೂಹ, ಕೃಷಿಕರು, ದಲಿತರ ಸಂಕಷ್ಟಗಳ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲವೆಂದ ಅವರು ಜಾತಿಯ ವಿಷಬೀಜವನ್ನು ಬಿತ್ತಿ ಮತ ಪಡೆಯುವ ಪ್ರಯತ್ನವಷ್ಟೆ ಆ ಪಕ್ಷದಿಂದ ನಡೆಯುತ್ತಿದೆ ಎಂದು ದೂರಿದರು.
ಎರಡು ರಾಷ್ಟ್ರೀಯ ಪಕ್ಷಗಳಿಗೆ ಬದಲಾಗಿ ಕರ್ನಾಟಕ ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯವಿದ್ದು, ಈ ಬಗ್ಗೆ ಜೆಡಿಎಸ್‌ನಿಂದ ಜನಜಾಗೃತಿಯನ್ನು ಮೂಡಿಸಲಾಗುವುದೆಂದರು.
ಶಾಂತಿ ಸೌಹಾರ್ದಯುತ ಸಮಾಜ ನಿರ್ಮಾಣದ ಅಗತ್ಯತೆಯನ್ನು ಜನರಲ್ಲಿ ಮನದಟ್ಟು ಮಾಡಿಕೊಡುವ ಉದ್ದೇಶದಿಂದ ಜೆಡಿಎಸ್‌ನಿಂದ ಹಿಂದು ಮುಸ್ಲಿಂ ಬಾಂಧವರನ್ನು ಒಳಗೊಂಡ ತಂಡಗಳನ್ನು ರಚಿಸಿ ಜನರ ಬಳಿ ತೆರಳುವುದಾಗಿ ತಿಳಿಸಿದರು.
ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಹಾಗೂ ಜಿಲ್ಲಾ ಜೆಡಿಎಸ್ ಪ್ರಮುಖ ಬಿ.ಎ. ಜೀವಿಜಯ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿದರು.
ಗೋಷ್ಠಿಯಲ್ಲಿ ಜೆಡಿಎಸ್ ಮೈಸೂರು ವಿಭಾಗೀಯ ಕಾರ್ಯಾಧ್ಯಕ್ಷ ವಿ.ನರಸಿಂಹ ಮೂರ್ತಿ, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ, ರಾಜ್ಯ ಕಾರ್ಯದರ್ಶಿ ಡಾ. ಯಾಲದಾಳು ಮನೋಜ್ ಬೋಪಯ್ಯ ಹಾಗೂ ವೀರಾಜಪೇಟೆ ಕ್ಷೇತ್ರದ ಅಧ್ಯಕ್ಷ ಮತೀನ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.







