ಬಸವ ಚಳವಳಿ ಇಂದಿಗೂ ಜೀವಂತವಾಗಿದೆ: ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು, ಜ.7: ಬಸವಣ್ಣ ಹಾಕಿಕೊಟ್ಟಿರುವಂತಹ ಚಳವಳಿಯ ಹಾದಿ ನಶಿಸಿ ಹೋಗದೇ ಇಂದಿಗೂ ಜೀವಂತವಾಗಿದ್ದು, ಸಮಾಜಕ್ಕೆ ನೀಡಬೇಕಾದ ಸಂದೇಶವನ್ನು ನಿರಂತರವಾಗಿ ನೀಡುತ್ತಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 70-80 ರ ದಶಕದ ನಂತರ ನಮ್ಮಲ್ಲಿನ ಸಾಮಾಜಿಕ ಚಳವಳಿಗಳು ಭ್ರಮನಿರಸನಗೊಳಿಸಿವೆ. ಆದರೆ, ವಚನ ಚಳವಳಿ ಸತ್ತಿಲ್ಲ. ಬಸವ ಚಳುವಳಿಗಳ ಮೇಲೆ ನನಗೆ ಅಪಾರ ನಂಬಿಕೆಯಿದ್ದು, ಆ ಚಳುವಳಿಗಳು ಇಂದಿಗೂ ನಶಿಸದೆ ಉಳಿದಿರುವುದು ಗಮನಾರ್ಹ ಎಂದರು.
ದೇಶದಲ್ಲಿ ಇಂದಿನ ಅನೇಕ ಪರ್ಯಾಯ ಚಳವಳಿಗಳು ಹುಟ್ಟಿಕೊಂಡವು. ಯಾವುದೂ ಶಾಶ್ವತವಾಗಿ ಉಳಿದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ಬಸವ ಚಳವಳಿ ಇಂದಿಗೂ ತನ್ನ ಅಸ್ಥಿತ್ವವನ್ನು ಕಳೆದುಕೊಂಡಿಲ್ಲ ಎಂದ ಅವರು, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಬಸವ ಚಳವಳಿ ಆಶಯವನ್ನು ಅರ್ಥ ಮಾಡಿಕೊಂಡು, ಅಳವಡಿಸಿಕೊಂಡರೆ ಮೇಲು-ಕೀಳು, ಶ್ರೇಷ್ಟ-ಕನಿಷ್ಟ ಎಂಬ ತಾರತಮ್ಯ ಎಂಬುದು ಇರುವುದಿಲ್ಲ. ಬದಲಿಗೆ ಎಲ್ಲಾರು ನಮ್ಮವರೇ ಎಂಬ ಭಾವನೆ ಬೆಳೆಯುತ್ತದೆ. ಶರಣರು ಚಳವಳಿಗಳನ್ನ ಜನರಿಗೆ ಬುತ್ತಿಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ಬಸವಣ್ಣ ವ್ಯಕ್ತಿಯ ಅಂಶಗಳನ್ನು ಪರಿಗಣಿಸದೆ ಧರ್ಮದ ಜವಾಬ್ದಾರಿಗಳನ್ನು ಪ್ರಪಂಚಕ್ಕೆ ತೋರಿಸಿದವರು. ಇಂದು ಬಸವ ಧರ್ಮ ದೇಶಕ್ಕೆ ಹೆಚ್ಚಿನ ಅಗತ್ಯವಿದೆ. ಬಸವ ಧರ್ಮ ಒಂದು ಸಮುದಾಯಕ್ಕೆ ಸೇರಿದಂತಹ ಧರ್ಮವಲ್ಲ. ಅದು ದೇಶಕ್ಕೆ ಅಗತ್ಯವಾದಂತಹ ಧರ್ಮವಾಗಿದೆ. ಇಂದು ವಚನಗಳಲ್ಲಿರುವ ತತ್ವಾದರ್ಶ ಜನರ ಜೀವನದಲ್ಲಿ ಅಳವಡಿಸಿಕೊಂಡು, ತಮ್ಮಲ್ಲಿರುವ ಕೊಳಕನ್ನು ತೊಳೆಯಬೇಕಾದಂತಹ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.
ಜಗತ್ತಿನ ಎಲ್ಲ ಚಳವಳಿಗಳಿಗೆ ಪೂರಕವಾಗಿ ತಾತ್ವಿಕ ಸಾಹಿತ್ಯ ಪ್ರಮುಖ ಪಾತ್ರ ವಹಿಸಿದೆ. ಆದರೆ, ವಚನ ಚಳವಳಿ ಸಂದರ್ಭದಲ್ಲಿ ಚಳವಳಿ ಪೂರ್ವಭಾವಿಯಾಗಿ ಯಾವುದೇ ಸಾಹಿತ್ಯ ಪ್ರೇರಣೆ ನೀಡಿಲ್ಲ. ಬದಲಿಗೆ ಚಳವಳಿ ಜೊತೆ ಜೊತೆ ಸಾಹಿತ್ಯ ರಚನೆಯಾಗಿದೆ. ಬಸವಣ್ಣ ತನ್ನನ್ನು ತಾನು ನಿಷ್ಟುರವಾದ ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಇಷ್ಟೊಂದು ಆತ್ಮವಿಮರ್ಶೆ ಮಾಡಿಕೊಂಡವರಲ್ಲಿ ಬೇರೊಬ್ಬರಿಲ್ಲ ಎಂದು ಸಿದ್ದರಾಮಯ್ಯ ನುಡಿದರು.
ಕೇವಲ ತಾತ್ವಿಕತೆ, ಅನೈತಿಕತೆಯನ್ನು ಅಳವಡಿಸಿಕೊಂಡೇ ಇಂದಿನ ಚಳವಳಿಗಳು ನಡೆಯುತ್ತಿವೆ. ಇಂತಹ ಚಳವಳಿಗಳನ್ನು ಮುನ್ನಡೆಸುತ್ತಿರುವುದರಿಂದ 12ನೇ ಶತಮಾನದಲ್ಲಿದ್ದ ಚಳವಳಿಗಳು ಅರ್ಥ, ಗೌರವವನ್ನು ಕಳೆದುಕೊಂಡಿವೆ. ಅಧಿಕಾರ ಬೇಕಾದಾಗ ಮಾತ್ರ ಚಳವಳಿಯ ಪ್ರಯೋಗವನ್ನು ಮಾಡಿ ಅದನ್ನು ಗಿಟ್ಟಿಸಿಕೊಳ್ಳುತ್ತಾರೆ. 10 ಜನ ಅನುಯಾಯಿಗಳನ್ನು ಕಟ್ಟಿಕೊಂಡು ಧ್ವನಿಯೆತ್ತಿ ಸ್ವಲ್ಪದಿನದ ನಂತರ ಸುಮ್ಮನಾಗಿ ಬಿಡುತ್ತಾರೆ ಎಂದು ಇಂದಿನ ಚಳವಳಿಗಳ ಮೇಲೆ ಕಿಡಿಕಾರಿದರು.
ಅಂಕಣಕಾರ ರಂಜಾನ್ ದರ್ಗಾ ಮಾತನಾಡಿ, ಜಗತ್ತಿನಲ್ಲಿ ಬಹು ಆಯಾಮಗಳಲ್ಲಿ ಚಿಂತನೆ ಮಾಡಿದವರು ಬಸವಣ್ಣನಾಗಿದ್ದು, ಜಗತ್ತಿನ ಇತಿಹಾಸವೇ ಇದಕ್ಕೆ ಸಾಕ್ಷಿಯಾಗಿದ್ದು, ದುಡಿಯುವ ರಚನೆ ಮಾಡಿದ ಸಾಹಿತ್ಯ ಜಗತ್ತಿನ ಮೊದಲನೇ ಸಾಹಿತ್ಯ. ಅದು ಬಸವಣ್ಣರ ಶರಣ ಸಾಹಿತ್ಯವಾಗಿದೆ ಎಂದು ಹೇಳಿದರು.
ಧರ್ಮವನ್ನು ರಕ್ಷಿಸುವವರನ್ನು ಧರ್ಮ ರಕ್ಷಿಸುತ್ತದೆ ಎಂದು ನಂಬಿಸಲಾಗಿದೆ. ಆದರೆ, ಇದು ಮನುಸೃತಿಯ ಮೂಲವಾಗಿದೆ ಎಂದ ಅವರು, ದೇಶದ ಶೇ.90 ರಷ್ಟು ಜನರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೇಲೆ ಬರಲಾರದಂತೆ ಮಾಡುವುದು ಈ ಧರ್ಮದ ಪ್ರಮುಖ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಬಸವಣ್ಣ ಹೇಳಿರುವ ವಚನಗಳ ಶಬ್ದಗಳ ಅರ್ಥವನ್ನು ಡಿಕ್ಷನರಿಯಲ್ಲಿ ಹುಡುಕಲು ಸಾಧ್ಯವಿಲ್ಲ. ಒಂದು ವಚನಕ್ಕೆ ನಾನಾರ್ಥಗಳಿರುತ್ತದೆ. ಹೊಲಸು ತಿನ್ನುವವನೇ ಹೊಲೆಯ, ಕೊಲ್ಲುವವನೇ ಮಾದಿಗ ಎಂದಿದ್ದಾರೆ. ಆದರೆ, ಇದನ್ನು ಹಲವರು ತಪ್ಪು ಅರ್ಥ ಮಾಡಿಕೊಂಡಿದ್ದಾರೆ. ನಿಜಾರ್ಥದಲ್ಲಿ ಹೊಲಸು ಎಂದರೆ ಬಸವ ಧರ್ಮದಲ್ಲಿ ಕಾಯಕ ಮಾಡುವವನು ಎಂದರ್ಥ. ಮಾದಿಗ ಎಂದೂ ಕೊಲ್ಲುವುದಿಲ್ಲ. ಕಾಯಕ ಮಾಡದೇ ಹೊಲೆಯ ಏನನ್ನು ಪಡೆಯುವುದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಸವ ಮಹಾ ಮನೆ ಸಂಸ್ಥೆಯ ಸಿದ್ದರಾಮ ಬೆಲ್ದಾಳ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಗಮೇಶ ಬಾದವಾಡಗಿ, ಗಾಂಧಿಭವನ ಕಾರ್ಯದರ್ಶಿ ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.