ಪೇದೆ ಮೇಲೆ ಹಲ್ಲೆ:ಆರೋಪ
ಬೆಂಗಳೂರು,ಜ.7-ಮಾನಸಿಕ ಅಸ್ವಸ್ಥನೊಬ್ಬ ಪೊಲೀಸ್ ಪೇದೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಹೆಬ್ಬಾಳದಲ್ಲಿ ನಡೆದಿದೆ ಎನ್ನಲಾಗಿದೆ.
ಮೂರು ದಿನಗಳ ಹಿಂದೆ ನಗರದ ಹೆಬ್ಬಾಳ ಪೊಲೀಸ್ ಠಾಣೆಯ ಪೇದೆಯಾಗಿರುವ ರವಿಶಂಕರ್ ಎಂಬುವರ ಮೇಲೆ ಮಾನಸಿಕ ಅಸ್ವಸ್ಥನೊಬ್ಬ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸ್ ಠಾಣೆಗೆ ಕರೆ ಮಾಡಿದ್ದ ಸಾರ್ವಜನಿಕರು, ಮಾನಸಿಕ ಅಸ್ವಸ್ಥನೋರ್ವ ಮನೆಯೊಂದಕ್ಕೆ ನುಗ್ಗಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿ ಪೊಲೀಸರನ್ನು ಕರೆಸಿದ್ದರು. ತಕ್ಷಣ ಪೇದೆ ರವಿಶಂಕರ್ ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ದೌಡಾಯಿಸಿದ್ದರು.
ಸ್ಥಳಕ್ಕೆ ಬಂದ ರವಿಶಂಕರ್ ಸ್ಥಳೀಯರ ಸಹಾಯದಿಂದ ಬಾಗಿಲು ಮುರಿದು ಆತನನ್ನು ರಕ್ಷಿಸಲು ಮುಂದಾಗಿದ್ದರು. ಬಾಗಿಲು ಮುರಿಯುತ್ತಿದ್ದಂತೆ ಒಳಗಿದ್ದ ಮಾನಸಿಕ ಅಸ್ವಸ್ಥ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಪೇದೆ ರವಿಶಂಕರ್‌ನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.





