ತುರ್ತು ಭೂಸ್ಪರ್ಶ ಮಾಡಿದ ಏರ್ಇಂಡಿಯಾ ವಿಮಾನ

ಮುಂಬೈ, ಜ. 8: ಗೋವಾದಿಂದ ಮುಂಬೈಗೆ ಹೋಗುತ್ತಿದ್ದ ಏರ್ಇಂಡಿಯಾ ವಿಮಾನ ಹೈಡ್ರಾಲಿಕ್ ಸಿಸ್ಟಂ ವೈಫಲ್ಯದಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ರವಿವಾರ ರಾತ್ರಿ ನಡೆದಿದೆ.
90 ಮಂದಿ ಪ್ರಯಾಣಿಕರನ್ನು ಹೊತ್ತಿದ್ದ ಏರ್ಬಸ್ ಎ-319 ಸುರಕ್ಷಿತವಾಗಿ ಇಳಿದಿದ್ದು, ಎಲ್ಲ ಪ್ರಯಾಣಿಕರನ್ನು ಯಾವುದೇ ತೊಂದರೆಯಾಗದಂತೆ ವಿಮಾನದಿಂದ ಇಳಿಸಲಾಗಿದೆ ಎಂದು ಏರ್ಇಂಡಿಯಾ ವಕ್ತಾರರು ಹೇಳಿದ್ದಾರೆ.
ಎಐ-662 ವಿಮಾನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ "ಆದ್ಯತೆ" ಮೇಲೆ ತುರ್ತು ಭೂಸ್ಪರ್ಶ ಮಾಡಿತು ಎಂದು ಅವರು ಹೇಳಿದ್ದಾರೆ.
ಆದರೆ ವಿಮಾನದ ಹೈಡ್ರಾಲಿಕ್ ವ್ಯವಸ್ಥೆ ವೈಫಲ್ಯ ಬಗ್ಗೆ ಪೈಲಟ್ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮುಖ್ಯ ರನ್ವೇನಲ್ಲಿ ತುರ್ತು ಭೂಸ್ಪರ್ಶಕ್ಕೆ ವ್ಯವಸ್ಥೆ ಮಾಡಲಾಗಿತ್ತು ಎಂದು ವಿಮಾನ ನಿಲ್ದಾಣದ ಮೂಲಗಳು ಹೇಳಿವೆ. ರಾತ್ರಿ 8.30ರ ವೇಳೆಗೆ ವಿಮಾನ ಸುರಕ್ಷಿತವಾಗಿ ಇಳಿದ 15 ನಿಮಿಷಗಳ ಬಳಿಕ ತುರ್ತು ಸ್ಥಿತಿಯನ್ನು ವಾಪಾಸು ಪಡೆಯಲಾಯಿತು ಎಂದು ಮೂಲಗಳು ವಿವರಿಸಿವೆ.