ಹನೂರು: 2ನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ

ಹನೂರು,ಜ.8: ನರೇಗಾ ಯೋಜನೆಯಡಿ ಕಳೆದ 6 ತಿಂಗಳ ಅವಧಿಯಲ್ಲಿ ರಾಮಾಪುರ ಗ್ರಾಪಂ ವ್ಯಾಪ್ತಿಯಲ್ಲಿ 113 ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು,19.19 ಲಕ್ಷ ರೂ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಾಪಂ ನರೇಗಾ ಸಂಯೋಜಕ ಮನೋಹರ್ ತಿಳಿಸಿದರು.
ಹನೂರು ಸಮೀಪದ ರಾಮಾಪುರ ಗ್ರಾಪಂ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 2017-18ನೇ ಸಾಲಿನ 2ನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯತ್ ಗೆ 8 ಗ್ರಾಮಗಳು ಒಳಪಟ್ಟಿದ್ದು, 2305 ಕುಟುಂಬಗಳಿವೆ. ಇದರಿಂದ ಸಾವಿರಕ್ಕೂ ಹೆಚ್ಚು ಕುಟುಂಬಗಳು ನರೇಗಾ ಯೋಜನೆಯಡಿ ಉದ್ಯೋಗವನ್ನು ಪಡೆದುಕೊಂಡಿದೆ. ಕಳೆದ 6 ತಿಂಗಳ ಅವಧಿಯಲ್ಲಿ ನರೇಗಾ ಯೋಜನೆಯಡಿ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಲ್ಲಿ ತೋಟಗಾರಿಕೆ, ರೇಷ್ಮೆ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಒತ್ತು ನೀಡಲಾಗಿದೆಯಲ್ಲದೇ ಜಾನುವಾರುಗಳ ನೀರಿನ ತೊಟ್ಟಿ, ರಸ್ತೆ ನಿರ್ಮಾಣ, ವಸತಿ ಯೋಜನೆಗಳು ಸೇರಿದಂತೆ ಸಾಮೂಹಿಕ ಹಾಗೂ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ದಿಸೆಯಲ್ಲಿ 113 ಕಾಮಗಾರಿಗಳಿಗೆ 19,19,441 ರೂಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಗ್ರಾಮಸ್ಥರು ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಗ್ರಾಮವು ಅಭಿವೃದ್ಧಿಯತ್ತ ಸಾಗಲು ಸಹಕಾರ ನೀಡಬೇಕು ಎಂದು ತಿಳಿಸಿದರು.
ಪಿಡಿಒ ಮಹದೇವಸ್ವಾಮಿ ಮಾತನಾಡಿ, ನರೇಗಾ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಪ್ರತಿ ಕುಟುಂಬದ ಕರಕುಶಲ ಕೂಲಿ ಕಾರ್ಮಿಕರು ಉದ್ಯೋಗವನ್ನು ಪಡೆಯಬಹುದಾಗಿದೆ. ಈ ಯೋಜನೆಯಡಿ ರಸ್ತೆ ಅಭಿವೃದ್ಧಿ, ಒಕ್ಕಣೆ ಕಣ ನಿರ್ಮಾಣ, ಜಮೀನು ಅಭಿವೃದ್ಧಿ, ಕೆರೆ ಅಭಿವೃದ್ಧಿ, ಶಾಲಾ ಕಂಪೌಂಡ್ ಸೇರಿದಂತೆ ಇನ್ನಿತರ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಆದುದರಿಂದ ಗ್ರಾಪಂ ವ್ಯಾಪ್ತಿಯಲ್ಲಿನ ಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರಲ್ಲದೇ ಈ ಬಾರಿ ನರೇಗಾ ಯೋಜನೆಯಡಿ 90 ಲಕ್ಷ ರೂ ವೆಚ್ಚದಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ನಲ್ಲಮ್ಮ, ಉಪಾಧ್ಯಕ್ಷ ಕನಕ, ಗ್ರಾಪಂ ಸದಸ್ಯರು, ಇಂಜನಿಯರ್ ಸಲ್ಮಾನ್, ಕಾರ್ಯದರ್ಶಿ ನಾಗರಾಜು ಹಾಗೂ ಇನ್ನಿತರರಿದ್ದರು.







