ದಾವಣಗೆರೆ: ಗಾಳಿ ಸುದ್ದಿಯಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣ

ದಾವಣಗೆರೆ,ಜ.8: ಕ್ಷುಲ್ಲಕ ಕಾರಣದಿಂದ ಕಳೆದ ರಾತ್ರಿ ಯುವಕರಿಬ್ಬರ ಮಧ್ಯೆ ನಡೆದ ವಾಗ್ವಾದ, ಚೂರಿ ಹಿರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾದ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ ಎಂಬ ಸುಳ್ಳು ಸುದ್ದಿ ಹರಡಿ ನಗರದಲ್ಲಿ ಸೋಮವಾರ ಬೆಳಿಗ್ಗೆ ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ನಗರದ ಕೊರಚರಹಟ್ಟಿಯ ಇಮ್ರಾನ್, ಜಿಲಾನಿ, ದುಗ್ಗೆಶ್ ಎಂಬುವರ ಮಧ್ಯೆ ಭಾನುವಾರ ರಾತ್ರಿ ವಾಗ್ವಾದ ನಡೆದಿತ್ತು. ಇದರಿಂದ ದುಗ್ಗೆಶ್ ಒಂದು ಗುಂಪನ್ನು ಕಟ್ಟಿಕೊಂಡು ಬಂದು ಇಮ್ರಾನ್ ಹಾಗೂ ಜಿಲಾನಿ ಮೇಲೆ ಹಲ್ಲೆ ಮಾಡಿದ್ದ. ಈ ಸಂದರ್ಭ ಇಮ್ರಾನ್ ತೀವ್ರವಾಗಿ ಗಾಯಗೊಂಡಿದ್ದ, ಆತನನ್ನು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲದೆ ಆರೋಪಿ ದುಗ್ಗೆಶನನ್ನು ಬಂಧಿಸಲಾಗಿತ್ತು. ಆದರೆ, ಸೋಮವಾರ ಬೆಳಿಗ್ಗೆ ಯಾರೋ ಕಿಡಿಗೇಡಿಗಳು ಬಂಧಿತ ಆರೋಪಿ ಮಾನಸಿಕ ಅಸ್ವಸ್ಥ ಎಂದು ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಸುದ್ದಿ ಹರಡಿದರು.
ಇದರಿಂದ ಕುಪಿತರಾದ ಬಡಾವಣೆಯ ನಾಗರಿಕರು, ಆಜಾದ್ ನಗರ ಠಾಣೆಗೆ ಮುತ್ತಿಗೆ ಹಾಕಿ ಆರೋಪಿಯನ್ನು ಬಂಧಿಸಲು ಆಗ್ರಹಿಸಿದರು. ಆರೋಪಿಯನ್ನು ಬಿಡುಗಡೆ ಮಾಡಿಲ್ಲ, ಪೊಲೀಸ್ ಕಸ್ಟಡಿಯಲ್ಲಿದ್ದಾನೆ ಎಂದು ಪೋಲಿಸರು ಹೇಳಿದರೂ ಕಿವಿಗೊಡಲಿಲ್ಲ.
ಈ ಸಂದರ್ಭ ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ವಾಗ್ವಾದ ನಡೆದು ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಯಿತು. ಆಗ ಎಎಸ್ಪಿ ಉದೇಶ್, ಡಿವೈಎಸ್ಪಿ ಎಂ.ಬಾಬು ಸ್ಥಳಕ್ಕೆ ಆಗಮಿಸಿ, ಸಾರ್ವಜನಿಕರೊಂದಿಗೆ ಚರ್ಚಿಸಿ, ಅವರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
600 ಪೊಲೀಸರ ನಿಯೋಜನೆ:
ಕಳೆದ ರಾತ್ರಿ ನಗರದಲ್ಲಿ ನಡೆದ ಚೂರಿ ಇರಿತಕ್ಕೆ ಸಂಬಂಧಿಸಿದಂತೆ 4 ಕೆಎಸ್ಆರ್ಪಿ, 5 ಡಿಆರ್ ತುಕಡಿ, ಪೊಲೀಸ್ ಅಧಿಕಾರಿ ಸೇರಿದಂತೆ ಒಟ್ಟು 600 ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ. ಆರ್ಎಂಸಿ, ಬೇತೂರು ರಸ್ತೆ, ಅರಳಿಮರ ವೃತ್ತ, ಪೋಲಿಸ್ ಠಾಣೆ, ಹಾಗೂ ಕೊರಚರ ಹಟ್ಟಿ ಸೇರಿದಂತೆ ವಿವಿಧೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ದುಗ್ಗೇಶ್ ವಿರುದ್ಧ ವಿವಿಧ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.
ಚೂರಿ ಇರಿತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಮ್ರಾನ್ ನನ್ನು ಮೊದಲು ಸಿ.ಜೆ. ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಎಸ್ಎಸ್ ಐಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಸಧ್ಯ ಆತ ಪ್ರಾಣಾಪಾಯಾದಿಂದ ಪಾರಾಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಆಜಾದ್ ನಗರ ಹಾಗೂ ಸುತ್ತಮುತ್ತಲ ಭಾಗದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೋಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕಾಗಿ ದುಗ್ಗೇಶ್ ಎಂಬಾತ ಇಮ್ರಾನ್ ಹಾಗೂ ಜಿಲಾನಿ ಎಂಬುವವರಿಗೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಎರಡು ಕೋಮಿನ ನಡುವೆ ಕೆಲ ಕಾಲ ಗೊಂದಲದ ವಾತಾವರಣ ಮೂಡಿತ್ತು. ಇದೀಗ ಆಜಾದ್ ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು.
ಡಾ.ಭೀಮಾಶಂಕರ್ ಎಸ್. ಗುಳೇದ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ







