ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ
ಶಿವಮೊಗ್ಗ, ಜ.8: ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರು ತಮ್ಮ ವಿವಿಧ ಬೇಡಿಕೆಗಳ ಇತ್ಯರ್ಥಕ್ಕಾಗಿ ಜ.17ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಮುಷ್ಕರ ನಡೆಸಲಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಬಿ. ಪ್ರೇಮಾ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕರ ಸೇವೆಯನ್ನು ಖಾಯಂಗೊಳಿಸಬೇಕು. ಕಾರ್ಮಿಕ ಕಾಯ್ದೆಯನ್ನು ಜಾರಿಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಕಾರ್ಯಕರ್ತೆ ಎಂಬ ಪದವನ್ನು ತೆಗೆದುಹಾಕಿ, ಶಿಕ್ಷಕಿ ಎಂದು ಘೋಷಿಸಬೇಕು.
ರಾಜ್ಯದಲ್ಲಿರುವ 3331 ಮಿನಿ ಅಂಗನವಾಡಿಗಳನ್ನು ಮುಖ್ಯ ಅಂಗನವಾಡಿ ಎಂದು ಪದೋನ್ನತಿಗೊಳಿಸಬೇಕು. ನೌಕರರಿಗೆ ಬಡ್ತಿ ಕಲ್ಪಿಸಬೇಕು. ಸೇವಾ ಹಿರಿತನದ ಮೇಲೆ ವೇತನ ನೀಡಬೇಕು. ಸ್ವಯಂ ಘೋಷಣಾ ನಿವೃತ್ತಿ, ಮಾತೃ ಪೂರ್ಣ ಯೋಜನೆಗೆ ಸೌಲಭ್ಯಗಳನ್ನು ಕಲ್ಪಿಸಬೇಕು. ಬೇಸಿಗೆ ರಜೆಯನ್ನು 15 ದಿನದಿಂದ 1 ತಿಂಗಳಿಗೆ ಹೆಚ್ಚಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಜ. 17 ರಂದು ಬೆಳಿಗ್ಗೆ 10.30 ಕ್ಕೆ ನಗರಸಭೆ ಆವರಣದಿಂದ ಪ್ರತಿಭಟನಾ ರ್ಯಾಲಿ ಆರಂಭಿಸಲಾಗುತ್ತಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಲಾಗುವುದು. ನಂತರ ಅಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷೆ ಎನ್.ಪಿ. ಭಾರತಿ, ಕಾರ್ಯದರ್ಶಿ ಎಸ್.ಕೆ. ಶಾಂತಾ, ಸಹಕಾರ್ಯದರ್ಶಿ ಸಂಪತ್ ಕುಮಾರಿ, ಖಜಾಂಚಿ ವರಲಕ್ಷ್ಮೀ, ನಾಗರತ್ನ, ರೂಪ, ವಿನೋದಾ ಮೊದಲಾದವರಿದ್ದರು.







