ತೋಟಗಾರಿಕೆ ಇಲಾಖೆಗೆ ಸೇರಿದ ಜಾಗದ ಒತ್ತುವರಿ: ಸಂರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ

ಶಿವಮೊಗ್ಗ, ಜ. 8: ಜಿಲ್ಲೆಯ ಭದ್ರಾವತಿ ತಾಲೂಕಿನ ವದಿಯೂರು ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗ ಒತ್ತುವರಿಯಾಗಿದ್ದು, ಇದರ ಸಂರಕ್ಷಣೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ಮಾನವ ಸಂರಕ್ಷಣೆ ಹಾಗೂ ಪ್ರಜಾ ಸೇವಾ ಸಮಿತಿಯು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಅರ್ಪಿಸಿತು.
ವದಿಯೂರು ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ ಸುಮಾರು 60 ಎಕರೆಗೂ ಹೆಚ್ಚು ಭೂಮಿಯಿದೆ. ಆದರೆ ಇದರಲ್ಲಿ 20 ಎಕರೆಗೂ ಹೆಚ್ಚು ಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಅಕ್ರಮ ಸಾಗುವಳಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಒತ್ತುವರಿ ಮಾಡಿರುವ ಜಮೀನಿನಲ್ಲಿ ಬತ್ತ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗಿದೆ. ಇಲ್ಲಿಯವರೆಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳಾಗಲಿ, ತಾಲೂಕು ಆಡಳಿತವಾಗಲಿ ಒತ್ತುವರಿದಾರರ ವಿರುದ್ದ ಯಾವುದೇ ಕ್ರಮ ಜರುಗಿಸಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣವೇ ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಗ್ರಾಮಕ್ಕೆ ಭೇಟಿಯಿತ್ತು ತೋಟಗಾರಿಕೆ ಇಲಾಖೆಗೆ ಸೇರಿದ ಒತ್ತುವರಿ ಜಾಗದ ಪರಿಶೀಲನೆ ನಡೆಸಿ, ಒತ್ತುವರಿ ತೆರವಿಗೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಜೊತೆಗೆ ಸಂಬಂಧಿಸಿದ ಇಲಾಖೆಗೆ ಸೂಕ್ತ ನಿರ್ದೇಶನ ಕೂಡ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಯವತಿಯಿಂದ ಬೀದಿಗಿಳಿದು ಜಿಲ್ಲಾಡಳಿತದ ವಿರುದ್ದ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಟಿ. ಕಿರಣ್ ಪವಾರ್, ಕಾರ್ತಿಕ್, ನೀಲೋಜಿ ರಾವ್, ಆರ್. ಸಂತೋಷ್, ಮಂಜುನಾಥ್ ಹುಣಸೆಹಳ್ಳಿ, ಅಶೋಕ್ ಕುಮಾರ್, ಕೆ.ಜಿ. ಆಕಾಶ್, ಆರ್.ಟಿ. ಯೋಗೀಶ್, ಗುರುಪ್ರಸಾದ್, ನಾಗರಾಜ್ ಪಾಲ್ಗೊಂಡಿದ್ದರು.







