ಗುರ್ಗಾಂವ್ ವಿದ್ಯಾರ್ಥಿ ಕೊಲೆ ಪ್ರಕರಣ: ಬಾಲಾರೋಪಿಗೆ ಜಾಮೀನು ನಿರಾಕರಣೆ

ಗುರ್ಗಾಂವ್,ಜ.8: ಇಲ್ಲಿಯ ಪ್ರತಿಷ್ಠಿತ ಶಾಲೆಯೊಂದರ ಏಳರ ಹರೆಯದ ವಿದ್ಯಾರ್ಥಿಯ ಕೊಲೆ ಪ್ರಕರಣದಲ್ಲಿ ಬಾಲಾರೋಪಿಯ ಜಾಮೀನು ಅರ್ಜಿಯನ್ನು ಸೋಮವಾರ ವಜಾಗೊಳಿಸಿರುವ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು, ಆಧಾರರಹಿತ ಅರ್ಜಿಯನ್ನು ಸಲ್ಲಿಸುವ ಮೂಲಕ ತನ್ನ ಸಮಯವನ್ನು ವ್ಯರ್ಥಗೊಳಿಸಿದ್ದಕ್ಕಾಗಿ ಅರ್ಜಿದಾರನಿಗೆ 21,000 ರೂ.ಗಳ ದಂಡವನ್ನು ವಿಧಿಸಿದೆ.
ಇನ್ನು ಮುಂದೆ ಪ್ರಕರಣದಲ್ಲಿಯ ವ್ಯಕ್ತಿಗಳ ಹೆಸರುಗಳು ಮತ್ತು ವಿಷಯಗಳನ್ನು ಉಲ್ಲೇಖಿಸುವಾಗ ತೀರ್ಪಿನಲ್ಲಿ ಪ್ರಸ್ತಾಪಿಸಲಾಗಿರುವ ಕಾಲ್ಪನಿಕ ಹೆಸರುಗಳನ್ನೇ ಬಳಸುವಂತೆ ನ್ಯಾಯಾಲಯವು ಮಾಧ್ಯಮಗಳಿಗೆ ತಾಕೀತು ಮಾಡಿತು.
ಬಾಲಾರೋಪಿ ಭೋಲು(ಕಾಲ್ಪನಿಕ ಹೆಸರು)ವಿನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾ.ಜಸ್ಬೀರ್ ಸಿಂಗ್ ಕುಂಡು ಅವರು, ಜಾಮೀನು ಕೋರಲು ಕಾಲ ಪಕ್ವವಾಗಿಲ್ಲ ಎಂದೂ ಗೊತ್ತಿದ್ದೂ ಮೇಲ್ಮನವಿದಾರ ತನಿಖಾ ಸಂಸ್ಥೆಯ 90 ದಿನಗಳ ಸಮಯದಲ್ಲಿ ಅಮೂಲ್ಯ 28 ದಿನಗಳನ್ನು ತೆಗೆದುಕೊಂಡು ಅರ್ಜಿಯನ್ನು ಸಲ್ಲಿಸಿದ್ದ. ಆತ ನ್ಯಾಯಾಲಯದ ಕಲಾಪಗಳ ಮೇಲೆ ಸವಾರಿ ಮಾಡಲು ಬಯಸಿದ್ದ. ಆಧಾರರಹಿತ ಅರ್ಜಿಯನ್ನು ಸಲ್ಲಿಸುವ ಮೂಲಕ ಆತ ನ್ಯಾಯಾಲಯದ ಏಳು ದಿನಗಳ ಕಲಾಪಗಳನ್ನು ವ್ಯರ್ಥಗೊಳಿಸಿದ್ದಾನೆ ಎಂದು ಕಿಡಿಕಾರಿದರು. ದಿನವೊಂದಕ್ಕೆ 3,000 ರೂ.ಗಳಂತೆ 21,000 ರೂ.ಗಳ ದಂಡವನ್ನು ತನ್ನ ತಂದೆಯ ಮೂಲಕ ಮೂರು ತಿಂಗಳಲ್ಲಿ ಕಟ್ಟುವಂತೆ ಅವರು ಬಾಲಾರೋಪಿಗೆ ಆದೇಶಿಸಿದರು.
ಪ್ರಕರಣದ ವಿಚಾರಣೆಯನ್ನು ಮುಚ್ಚಿದ ಕೊಠಡಿಯಲ್ಲಿ ನಡೆಸುವುದಾಗಿ ಹೇಳಿದ ನ್ಯಾಯಾಲಯವು, ಕೊಲೆಯಾದ ಬಾಲಕನನ್ನು ‘ಪ್ರಿನ್ಸ್’ ಮತ್ತು ಶಾಲೆಯನ್ನು ‘ವಿದ್ಯಾಲಯ’ ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಬಾಲ ನ್ಯಾಯಮಂಡಳಿಯೂ ಡಿ.15ರಂದು ಬಾಲಾರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.