ವಿಕಾಸ್ ಕಾಲೇಜಿಗೆ ಕೇಂದ್ರ ಸಚಿವ ಚೌಧರಿ ಬೀರೇಂದ್ರ ಸಿಂಗ್ ಭೇಟಿ: ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ

ಮಂಗಳೂರು, ಜ.8: ನಗರದ ವಿಕಾಸ್ ಎಜುಕೇಶನ್ ಟ್ರಸ್ಟ್‌ನ ಬೆಳ್ಳಿ ಹಬ್ಬದ (25ನೆ ವರ್ಷ) ಲಾಂಛನವನ್ನು ಇಂದು ಕೇಂದ್ರ ಉಕ್ಕು ಖಾತೆಯ ಸಚಿವ ಚೌಧರಿ ಬೀರೇಂದ್ರ ಸಿಂಗ್ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಮಂಗಳೂರು ಶಿಕ್ಷಣ ದ ಕೇಂದ್ರವಾಗಿ ಬೆಳೆಯುತ್ತಿದೆ. ದೇಶದ ವಿವಿಧ ಭಾಗದ ಜನರು ಉತ್ತಮ ಶಿಕ್ಷಣ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ. ದೇಶದ ಜನಸಂಖ್ಯೆಯಲ್ಲಿ ಅರ್ಧ ಭಾಗಕ್ಕೂ ಹೆಚ್ಚು ಯುವ ಜನರಿದ್ದಾರೆ. ಯುವಜನರಿಗೆ ಅವರ ಕೌಶಲ್ಯ ವೃದ್ಧಿಪಡಿಸಲು ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ. ಅಮೇರಿಕಾ ದೇಶದ ಕೇಂದ್ರದಲ್ಲಿ ಇರುವ ಜನಸಂಖ್ಯೆಯಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಭಾರತದ ಯುವಜನರು ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂದು ಬೀರೇಂದ್ರ ಸಿಂಗ್ ತಿಳಿಸಿದ್ದಾರೆ.
ವಿಕಾಸ್ ಎಜುಕೇಶನ್ ಟ್ರಸ್ಟ್ 25ವರ್ಷ ಪೂರೈಸುತ್ತಿರುವುದರೊಂದಿಗೆ ವಿವಿಧ ಪ್ರದೇಶಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಬೀರೇಂದ್ರ ಸಿಂಗ್ ತಿಳಿಸಿದರು.
ಕೇಂದ್ರ ಸಚಿವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ವಿವೇಕ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಕೃಷ್ಣ ಜೆ.ಪಾಲೇಮಾರ್, ವಿವೇಕ ಪದವಿ ಪೂರ್ವ ಕಾಲೇಜಿನ ಸಂಚಾಲಕ ಶ್ರೀಪತಿ ರಾವ್, ಪ್ರಾಂಶುಪಾಲ ಪ್ರೊ. ರಾಜಾ ರಾಮ, ಸಂಸ್ಥೆಯ ಸಲಹೆಗಾರರಾದ ವಿವೇಕ ಪ್ರಭು ಮೊದಲಾದವರು ಸ್ವಾಗತಿಸಿದರು.
ನೋಬೆಲ್ ಪ್ರಶಸ್ತಿ ವಿಜೇತರೊಂದಿಗೆ ಸಂವಾದ:- ನಗರಕ್ಕೆ ಭೇಟಿ ನೀಡಿದ್ದ 2012ರ ಭೌತಶಾಸ್ತ್ರ ವಿಷಯದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಸರ್ಜ್ ಹ್ಯಾರೋಶ್ ವಿಕಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವಿಜ್ಞಾನದ ಮೂಲಭೂತ ವಿಷಯಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ವಿಜ್ಞಾನದ ಮುಂದಿರುವ ಸವಾಲುಗಳನ್ನು ತಿಳಿದುಕೊಂಡಿರಬೇಕು. ಇಂಧನ ಸಮಸ್ಯೆ, ಹೆಚ್ಚುತ್ತಿರುವ ಪರಿಸರ ಮಾಲಿನ್ಯ ,ಇದರಿಂದ ಉಂಟಾಗುತ್ತಿರುವ ಹಸಿರು ಮನೆ ಪರಿಣಾಮ, ತಾಪಮಾನದ ಹೆಚ್ಚಳ ಮೊದಲಾದ ಸಮಸ್ಯೆಗಳು ಹೇಗೆ ಸೃಷ್ಟಿಯಾಗಿವೆ. ಅದರಿಂದ ಯಾವ ಸಮಸ್ಯೆಗಳು ಉಂಟಾಗುತ್ತಿವೆ, ಈ ಸವಾಲುಗಳನ್ನು ಎದುರಿಸಲು ವಿಜ್ಞಾನ ಅಧ್ಯಯನ ಸಹಕಾರಿಯಾಗ ಬೇಕಾಗಿದೆ. 50ವರ್ಷಗಳ ಹಿಂದೆ ವಿಜ್ಞಾನ ತಂತ್ರಜ್ಞಾನ ಈ ರೀತಿಯಲ್ಲಿ ಬೆಳೆದಿರಲಿಲ್ಲ. ಈಗ ವಿಜ್ಞಾನದ ಬೆಳವಣಿಗೆ ನಮ್ಮ ಮುಂದಿರುವ ಹಲವು ಸವಾಲುಗಳಿಗೆ ಉತ್ತರ ನೀಡಲು ಸಹಕಾರಿಯಾಗಿದೆ. ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಲು ಅನುಕೂಲವಾಗಿದೆ ಇವುಗಳನ್ನು ಬಳಸಿಕೊಂಡು ಯುವ ವಿದ್ಯಾರ್ಥಿಗಳು ಉನ್ನತ ಗುರಿಯೊಂದಿಗೆ ಮುನ್ನಡೆಯಬೇಕಾಗಿದೆ ಎಂದು ಹ್ಯಾರೋಶ್ ತಿಳಿಸಿದ್ದಾರೆ.







