ಬಿಜೆಪಿಗೆ ಹಿಂದೂ-ಮುಸ್ಲಿಂ ಎರಡೂ ಒಂದೇ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಜ.8: ಭಾರತೀಯ ಜನತಾ ಪಕ್ಷಕ್ಕೆ ಹಿಂದೂ-ಮುಸ್ಲಿಂ ಎರಡೂ ಸಮುದಾಯಗಳು ಒಂದೇ. ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪಕ್ ಹಾಗೂ ಬಶೀರ್ ಹತ್ಯೆಯನ್ನು ಮುಂದಿಟ್ಟುಕೊಂಡು ಹಿಂದೂ-ಮುಸ್ಲಿಮರ ಸಂಬಂಧ ಹಾಳು ಮಾಡುವ ಷಡ್ಯಂತರ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಸೋಮವಾರ ನಗರದ ಆನಂದ್‌ರಾವ್ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೀಪಕ್ ಮತ್ತು ಬಶೀರ್ ಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾ ರೆಡ್ಡಿ ಒಂದು ದಿನವಾದರೂ, ಉನ್ನತ ಅಧಿಕಾರಿಗಳ ಸಭೆ ನಡೆಸಿ, ಕೊಲೆಗಳನ್ನು ನಿಯಂತ್ರಿಸುವ ಕುರಿತು ಚರ್ಚೆ ನಡೆಸಿಲ್ಲ ಎಂದರು.
ಅಧಿಕಾರದಲ್ಲಿ ಯಾವುದೇ ಸರಕಾರವಿರಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಮೊದಲ ಕರ್ತವ್ಯ. ಆದರೆ, ಇಂದಿನ ರಾಜ್ಯ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಪ್ರತಿದಿನ ಅದು ಸಾಬೀತಾಗುತ್ತಿದೆ ಎಂದು ಆಪಾದಿಸಿದರು.
ರಾಜ್ಯದಲ್ಲಿ ಸರಕಾರ ಅಧಿಕಾರದ ಅವಧಿ ಉಳಿದಿರುವುದು ಕೇವಲ ನಾಲ್ಕು ತಿಂಗಳು. ಹೀಗಾಗಿ, ಉಳಿದಿರುವ ನಾಲ್ಕು ತಿಂಗಳಿನಲ್ಲಾದರೂ ಯಾವುದೇ ಕೊಲೆಗಳು ನಡೆಯದಂತೆ ಎಚ್ಚರಿಕೆ ವಹಿಸಿ ಸರಕಾರ ಘನತೆ ಉಳಿಸಿಕೊಳ್ಳಲಿ ಎಂದ ಅವರು, ಮಾನ-ಮರ್ಯಾದೆಯಿಲ್ಲದ ಸರಕಾರದ ವಿರುದ್ಧ ಜನರ ಮುಂದೆ ಏನು ಹೇಳಬೇಕು ಎಂಬುದು ಗೊತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ 4 ವರ್ಷಗಳ ಆಡಳಿತದ ಅವಧಿಯಲ್ಲಿ 6,500 ಕೊಲೆಗಳು ನಡೆದಿದೆ. 19 ಸಾವಿರ ಮಹಿಳೆಯರ ಮೇಲೆ ಅತ್ಯಾಚಾರ, 5,300 ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ, 3,569 ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಸರಕಾರವೇ ಅಧಿಕೃತವಾಗಿ ಮಾಹಿತಿ ನೀಡಿದ್ದು, ಇದು ದೇಶದ ಇತಿಹಾಸದಲ್ಲಿ ದಾಖಲೆಯಾಗಿದೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಆರೋಪ ಮಾಡಲು ಯಾವ ಸಾಕ್ಷಗಳಿವೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲೆಸೆದ ಯಡಿಯೂರಪ್ಪ, ಉಡಾಫೆ ಪ್ರತಿಕ್ರಿಯೆಗಳು ನೀಡುವ ಮೂಲಕ ತನಿಖೆಯ ದಿಕ್ಕು ತಪ್ಪಿಸಲು ಮುಂದಾಗಬಾರದು ಎಂದು ಟೀಕಿಸಿದರು.
ಸಂಸದೆ ಶೋಭ ಕರಂದ್ಲಾಜೆ ಅವರು ಮಾತನಾಡಿ, ಹಿಂದುತ್ವ ಹೋರಾಟ ಮುಸಲ್ಮಾನರ ವಿರುದ್ಧ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಜಿಲ್ಲೆಗೆ ಹೋಗುತ್ತಾರೋ ಆ ಜಿಲ್ಲೆಗಳಲ್ಲಿ ಅಪರಾಧಿಗಳು ಅಟ್ಟಹಾಸ ನಡೆಸುತ್ತಾರೆ. ಕೊಲೆಗಡುಕರನ್ನು ಬಂಧಿಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸುವ ಧೈರ್ಯ ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಶಾಸಕ ಸಿ.ಟಿ.ರವಿ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕರಾದ ಸುರೇಶ್ ಕುಮಾರ್, ಸೋಮಣ್ಣ, ವಿಜಯ್ ಕುಮಾರ್, ಅರವಿಂದ ಲಿಂಬಾವಳಿ, ಮುನಿರಾಜು ಸೇರಿದಂತೆ ಬಿಬಿಎಂಪಿ ಪಾಲಿಕೆ ಸದಸ್ಯರು, ವಿಧಾನಪರಿಷತ್ತು ಸದಸ್ಯರು ಹಾಗೂ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.







